ಬಂಡವಾಳ ಹೂಡಿಕೆಗೆ ಉದ್ಯಮಿಗಳು ಸಲ್ಲಿಸುವ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಪಡೆಯುವ ರಾಜ್ಯದಲ್ಲಿ ಕರ್ನಾಟಕ ಕಳೆದ ಎರಡು ವರ್ಷಗಳಿಂದಲೂ ಮೊದಲನೇ ಸ್ಥಾನದಲ್ಲಿದೆ. ಈಗಲೂ ಅದೇ ಸ್ಥಾನದಲ್ಲಿದೆ.
ಬೆಂಗಳೂರು: ಇಡೀ ದೇಶದಲ್ಲೇ ಬಂಡವಾಳ ಹೂಡಿಕೆಗೆ ಅತಿ ಹೆಚ್ಚು ಪ್ರಸ್ತಾವನೆ ಪಡೆಯುವ ರಾಜ್ಯಗಳ ಯಾದಿಯಲ್ಲಿ ಕರ್ನಾಟಕ ಮೊದಲ ಸ್ಥಾನವನ್ನು ಮತ್ತೆ ಕಾಯ್ದುಕೊಂಡಿದೆ. ಆದರೆ, ವಾಸ್ತವಿಕ ಬಂಡವಾಳ ಹೂಡಿಕೆಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎಂಟನೇ ಸ್ಥಾನದಲ್ಲಿದೆ.
ಬಂಡವಾಳ ಹೂಡಿಕೆಗೆ ಉದ್ಯಮಿಗಳು ಸಲ್ಲಿಸುವ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಪಡೆಯುವ ರಾಜ್ಯದಲ್ಲಿ ಕರ್ನಾಟಕ ಕಳೆದ ಎರಡು ವರ್ಷಗಳಿಂದ ಅಗ್ರ ಸ್ಥಾನದಲ್ಲಿತ್ತು. ಈ ಬಾರಿಯೂ ಅದು ಮುಂದುವರೆದಂತೆ ಆಗಿದೆ.
ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮಾಹಿತಿ ಪ್ರಕಾರ, 2018ನೇ ಸಾಲಿನ ಜನವರಿಯಿಂದ ಆಗಸ್ಟ್‌ವರೆಗೆ ರಾಜ್ಯದಲ್ಲಿ 79,866 ಕೋಟಿ ರು. ಬಂಡವಾಳ ಹೂಡಲು ವಿವಿಧ ಉದ್ಯಮಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಇದರಲ್ಲಿ ಹೂಡಿಕೆಯಾಗಿರುವುದು ಕೇವಲ 4,723 ಕೋಟಿ ರು. ಮಾತ್ರ. ಮಹಾರಾಷ್ಟ್ರದಲ್ಲಿ ಈಗಾಗಲೇ ಆಗಸ್ಟ್‌ವರೆಗೆ 21,197 ಕೋಟಿ ರು. ಬಂಡವಾಳ ಹೂಡಿಕೆಯಾಗಿದೆ. ನಂತರ ಸ್ಥಾನದಲ್ಲಿ ಗುಜರಾತ್ ಇದ್ದು 20,373 ಕೋಟಿ ರು.ನಷ್ಟುಬಂಡವಾಳ ಹೂಡಿಕೆಯಾಗಿದೆ.
2013ರಲ್ಲಿ ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ, 2014 ಮತ್ತು 2015ರಲ್ಲಿ ಕ್ರಮವಾಗಿ 5 ಮತ್ತು 4ನೇ ಸ್ಥಾನಕ್ಕೇರಿತ್ತು. ನಂತರ 2016ರಲ್ಲಿ 1.54 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನಕ್ಕೇರಿತ್ತು. 2017ರಲ್ಲೂ 1.41 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನದಲ್ಲೇ ಮುಂದುವರೆದಿತ್ತು.
ಆದರೆ, ಇದೀಗ 2018ನೇ ಸಾಲಿನಲ್ಲೂ ಆಗಸ್ಟ್ ತಿಂಗಳ ವರೆಗೆ ರಾಜ್ಯದಲ್ಲಿ ಪ್ರಸ್ತಾವಿತ ಬಂಡವಾಳ ಮೊತ್ತಕ್ಕೂ, ಹೂಡಿಕೆಯಾಗಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ರಾಜ್ಯದಲ್ಲಿ 79,866 ಕೋಟಿ ರು. ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿದ್ದು, ಪ್ರಸ್ತಾಪಿತ ಬಂಡವಾಳದ ಲೆಕ್ಕಾಚಾರದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೂ, ಈಗಾಗಲೇ ಹೂಡಿಕೆಯಾಗಿರುವ ಬಂಡವಾಳಕ್ಕೆ ಹೋಲಿಸಿದರೆ 8ನೇ ಸ್ಥಾನದಲ್ಲಿದೆ. 2017ರಲ್ಲಿ ಇದೇ ಅವಧಿಯಲ್ಲಿ ಹೂಡಿಕೆಯಾಗಿದ್ದ ಬಂಡವಾಳಕ್ಕೆ ಹೋಲಿಸಿದರೆ ಶೇ.93.38ರಷ್ಟುಕಡಿಮೆಯಾಗಿದೆ.
