Asianet Suvarna News Asianet Suvarna News

ಜಿಎಸ್‌ಟಿ ನಷ್ಟ ಭರ್ತಿಗೆ 11324 ಕೋಟಿ ರೂ ಸಾಲ.: ಕೇಂದ್ರದ ಒಂದನೇ ಆಯ್ಕೆ ಒಪ್ಪಿದ ರಾಜ್ಯ!

\ ಜಿಎಸ್‌ಟಿ ನಷ್ಟಭರ್ತಿಗೆ .11324 ಕೋಟಿ ಸಾಲ| 1ನೇ ಆಯ್ಕೆ ಒಪ್ಪಿಕೊಳ್ಳಲು ರಾಜ್ಯ ಸಮ್ಮತಿ| ರಾಜ್ಯಕ್ಕೆ ಒಟ್ಟು 18289 ಕೋಟಿ ಪರಿಹಾರ| ಇದರಲ್ಲಿ ಸಾಲದಿಂದ 11324 ಕೋಟಿ ಭರ್ತಿ| ಉಳಿದ 6865 ಕೋಟಿ ಸೆಸ್‌ನಿಂದ ಪಾವತಿ

Karnataka to follow Option One meet reform linked timelines for additional borrowing says Home Minister
Author
Bangalore, First Published Sep 3, 2020, 7:28 AM IST

 ಬೆಂಗಳೂರು(ಆ.03): ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರದ ಕುರಿತು ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಪೈಕಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುವ ಮೊದಲನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಪ್ರಕಾರ, 18,289 ಕೋಟಿ ಪರಿಹಾರ ಪಡೆಯಲು ತೀರ್ಮಾನಿಸಿದೆ.

18,289 ಕೋಟಿ ರು,ಅಥವಾ 25,508 ಕೋಟಿ ರು. ಪರಿಹಾರದ 2 ಆಯ್ಕೆಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಕುರಿತ ಮೌಲ್ಯಮಾಪನ ಮಾಡಿದ ಬಳಿಕ ರಾಜ್ಯದ ಹಣಕಾಸುಗಳಿಗೆ ಅನುಕೂಲವಾಗುವ ಒಟ್ಟು 18,289 ಕೋಟಿ ರು. ಪರಿಹಾರ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರದಿಂದ ಸಾಲ ಪಡೆಯುವ ಆಯ್ಕೆಯನ್ನು ಮುಂದಿಡಲು ನಿರ್ಧರಿಸಲಾಗಿದೆ. ಜಿಎಸ್‌ಟಿ ಅಡಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಜಿಎಸ್‌ಟಿ ಪರಿಷತ್‌ ನಿರ್ಧರಿಸಿದರೆ ಪರಿವರ್ತನೆಯ ಅವಧಿಯಲ್ಲಿನ ಬಾಕಿ ಪರಿಹಾರವನ್ನು 2022ರ ಬಳಿಕ ಸೆಸ್‌ ವಿಸ್ತರಿಸುವ ಮೂಲಕ ಪೂರೈಸಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆ ಒಂದರಡಿಯಲ್ಲಿ ಕರ್ನಾಟಕ 18,289 ಕೋಟಿ ರು. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರು. ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ. ಉಳಿದ 11,324 ಕೋಟಿ ರು.ಗಳಿಗೆ ಕರ್ನಾಟಕ ವಿಶೇಷ ವಿಂಡೋ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ ಹಾಗೂ ಭವಿಷ್ಯದಲ್ಲಿ ಪರಿಹಾರ ಸೆಸ್‌ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಪೂರೈಸಲಾಗುವುದು.

ಆಯ್ಕೆ ಎರಡರಡಿಯಲ್ಲಿ ರಾಜ್ಯವು ಒಟ್ಟು 25,508 ಕೋಟಿ ರು. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರು. ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ ಮತ್ತು ಉಳಿದ ಮೊತ್ತ 18,543 ಕೋಟಿ ರು.ಗಳಿಗೆ ಮಾರುಕಟ್ಟೆಸಾಲದ ಮೂಲಕ ಪಡೆಯಲು ಅವಕಾಶ ಇರುತ್ತದೆ. ಆದರೆ, ಜಿಎಸ್‌ಡಿಪಿಯ ಶೇ.1ರಷ್ಟು(18,036 ಕೋಟಿ ರು.) ಯಾವುದೇ ಷರತ್ತಿಗೊಳಪಡದೆ ಇರುವ ಸಾಲ ಪಡೆಯಲು ರಾಜ್ಯಕ್ಕೆ ಪ್ರತ್ಯೇಕವಾಗಿ ಲಭ್ಯ ಇರುವುದಿಲ್ಲ. ಇದರಿಂದ ರಾಜ್ಯವು ಪಡೆಯಬಹುದಾದ ಸಾಲ ಮೊತ್ತವು ಗಣನೀಯವಾಗಿ ಅಂದರೆ, 10,817 ಕೋಟಿ ರು. ಕಡಿಮೆಯಾಗುವುದು. ಆಯ್ಕೆ ಎರಡರಡಿಯಲ್ಲಿ ಮೇಲಿನ ಮಾರುಕಟ್ಟೆಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ತನ್ನದೇ ಸಂಪನ್ಮೂಲಗಳಿಂದ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಎರಡು ಆಯ್ಕೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಆಯ್ಕೆ 1ರಿಂದ ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಭಾವಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಆಯ್ಕೆ ಒಂದಕ್ಕೆ ಆದ್ಯತೆಯನ್ನು ನೀಡಿ ಕೇಂದ್ರಕ್ಕೆ ಮಾಹಿತಿ ನೀಡಲು ನಿರ್ಧರಿಸಿದೆ. ಇದು ಪ್ರಸ್ತುತ ಹಣಕಾಸು ಸಾಲಿನಲ್ಲಿ ತನ್ನ ಆದಾಯವನ್ನು ಹೆಚ್ಚಿಸಲು ರಾಜ್ಯಕ್ಕೆ ಸಹಾಯವಾಗಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಹೊರೆಯಿಲ್ಲ

ಆಯ್ಕೆ 1ರಲ್ಲಿ ಕರ್ನಾಟಕ ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ. ಅಸಲು ಹಾಗೂ ಬಡ್ಡಿ ಮರುಪಾವತಿ ಇಲ್ಲದೇ ಸೆಸ್‌ ಮುಖಾಂತರ ತುಂಬಿಕೊಡುತ್ತದೆ. ಇದರಿಂದ ರಾಜ್ಯಕ್ಕೆ ಯಾವುದೇ ರೀತಿಯ ಆರ್ಥಿಕ ಭಾರವಾಗುವುದಿಲ್ಲ.

-ಬಸವರಾಜ ಬೊಮ್ಮಾಯಿ, ಗೃಹ ಸಚಿವರು, ಸದಸ್ಯರು ಜಿಎಸ್‌ಟಿ ಮಂಡಳಿ

Follow Us:
Download App:
  • android
  • ios