ಬೆಂಗಳೂರು[ಫೆ.11]: ಮುಂಬರುವ ಬಜೆಟ್‌ನಲ್ಲಿ ಇಂಧನದ ಮೇಲಿನ ತೆರಿಗೆಯನ್ನು 1 ರು. ಕಡಿತಗೊಳಿಸುವಂತೆ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘಟನೆಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಸೋಮವಾರ ನಡೆದ ರಾಜ್ಯ ಬಜೆಟ್‌ ಪೂರ್ವ ಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಒಕ್ಕೂಟದ ಪದಾಧಿಕಾರಿಗಳು, ಇತ್ತೀಚಿನ ಕೇಂದ್ರದ ಬಜೆಟ್‌ನಲ್ಲಿ ಇಂಧನದ ಮೇಲೆ ಮತ್ತೆ ತೆರಿಗೆ ಹೆಚ್ಚಳ ಮಾಡಿರುವುದರಿಂದ ಸಂಕಷ್ಟದಲ್ಲಿರುವ ಲಾರಿ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಡೀಸೆಲ್‌ ಮೇಲಿನ ತೆರಿಗೆಯಲ್ಲಿ 1 ರು. ಇಳಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಅಂತೆಯೇ ರಾಜ್ಯದಲ್ಲಿ ಈ ಹಿಂದೆ ಇದ್ದ ಸ್ಥಳೀಯ ರಸ್ತೆಗಳನ್ನೇ ಹೆದ್ದಾರಿಗಳಾಗಿ ಪರಿವರ್ತಿಸಿ ಟೋಲ್‌ ವಿಧಿಸಲಾಗುತ್ತಿದೆ. ಕಂಪನಿಗಳು ಸಾಗಣೆದಾರರ ಕೊಳ್ಳೆ ಹೊಡೆಯುತ್ತಿವೆ. ಹೀಗಾಗಿ ಸದರಿ ಟೋಲ್‌ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಶೀಘ್ರ ಹೊಸ ಮಾದರಿಯ 1 ರು. ನೋಟು ಬಿಡುಗಡೆ!

ಚಾಲಕರನ್ನು ಪ್ರೋತ್ಸಾಹಿಸಲು ‘ವಾಣಿಜ್ಯ ವಾಹನಗಳ ಚಾಲಕರ ನಿಧಿ’ ಸ್ಥಾಪಿಸಿ, ಚಾಲನಾ ಪರವಾನಗಿ ಪಡೆದು 20 ವರ್ಷ ಕಳೆದಿರುವ ಲಾರಿ ಚಾಲಕರಿಗೆ 25 ಸಾವಿರ ರು. ನೀಡಬೇಕು. ಸಾಗಣೆ ಉದ್ಯಮದಲ್ಲಿ ಚಾಲಕರ ಅಭಾವವಿದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ಖಾಸಗಿ ಚಾಲಕರಿಗಾಗಿ ‘ಚಾಲಕ ತರಬೇತಿ ಕೇಂದ್ರ’ ಆರಂಭಿಸಬೇಕು. ಆರ್‌ಟಿಓ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೆಲಸಗಳು ವಿಳಂಬವಾಗುತ್ತಿವೆ. ಹೀಗಾಗಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಮುಂಗಡ ರಸ್ತೆ ತೆರಿಗೆ ಪಾವತಿ ವಿಳಂಬಕ್ಕೆ ವಿಧಿಸುತ್ತಿರುವ ಶೇ.20ರಷ್ಟುದಂಡವನ್ನು ಕೈಬಿಡಬೇಕು. ಮುಂಬರುವ ಬಜೆಟ್‌ನಲ್ಲಿ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈಡೇರಿಸುವಂತೆ ಒಕ್ಕೂಟದ ಮನವಿ ಮಾಡಿದೆ.

ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!