ಶೀಘ್ರ ಹೊಸ ಮಾದರಿಯ 1 ರು. ನೋಟು ಬಿಡುಗಡೆ!
ಶೀಘ್ರ ಬರಲಿದೆ 1 ರು. ಹೊಸ ನೋಟು!| ನೋಟು ಮುದ್ರಣಕ್ಕೆ ವಿತ್ತ ಸಚಿವಾಲಯ ಅಧಿಸೂಚನೆ
ನವದೆಹಲಿ[ಫೆ.11]: ಎರಡೂವರೆ ವರ್ಷಗಳ ಹಿಂದೆ ಒಂದು ಶತಮಾನ ಪೂರೈಸಿರುವ 1 ರು. ಮುಖಬೆಲೆಯ ನೋಟನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 1 ರು. ನೋಟು ಮುದ್ರಣ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಫೆ.7ರಂದು ಅಧಿಸೂಚನೆ ಹೊರಡಿಸಿದೆ.
ನೋಟಿನ ಬಣ್ಣ, ವಿನ್ಯಾಸ, ಗಾತ್ರ ಮತ್ತಿತರೆ ಮಾಹಿತಿಗಳು ಅಧಿಸೂಚನೆಯಲ್ಲಿವೆ. ನೋಟು 9.7*6.3 ಸೆಂ.ಮೀ.ನಷ್ಟಿರಬೇಕು. 110 ಮೈಕ್ರಾನ್‌ನಷ್ಟುದಪ್ಪಗಿರಬೇಕು. 90 ಜಿಎಸ್‌ಎಂನಷ್ಟುತೂಕವಿರಬೇಕು. ಅಶೋಕ ಸ್ತಂಭದ ವಾಟರ್‌ಮಾರ್ಕ್ ಅನ್ನು ಒಂದು ಬದಿಯಲ್ಲಿ ಹೊಂದಿರಬೇಕು. ಅದರಲ್ಲಿ ಸತ್ಯಮೇವ ಜಯತೆ ಎಂಬುದು ಇರಬಾರದು. ‘1’ ಎಂದು ನೋಟಿನೊಳಗೆ ಅಡಕವಾಗಿರಬೇಕು. ‘ಭಾರತ್’ ಎಂಬುದೂ ಇರಬೇಕು.
ನೋಟಿನಲ್ಲಿ ‘ಗವರ್ನಮೆಂಟ್ ಆಫ್ ಇಂಡಿಯಾ’ ಎಂಬ ಇಂಗ್ಲಿಷ್ ಸಾಲಿನ ಮೇಲೆ ‘ಭಾರತ್’ ಎಂದು ಹಿಂದಿಯಲ್ಲಿ ನಮೂದಾಗಿರಬೇಕು. ವಿತ್ತ ಕಾರ್ಯದರ್ಶಿ ಅತಾನು ಚಕ್ರವರ್ತಿ ಅವರ ಸಹಿ ಎರಡು ಭಾಷೆಯಲ್ಲಿ ಇರಬೇಕು. 1 ರು. ನಾಣ್ಯದ ಚಿತ್ರ ಹೊಂದಿರಬೇಕು.
ಹಿಂಭಾಗದಲ್ಲಿ ದೇಶದ ಕೃಷಿ ಕ್ಷೇತ್ರದ ಪಾರಮ್ಯವನ್ನು ಚಿತ್ರಿಸಲು ಧಾನ್ಯಗಳ ವಿನ್ಯಾಸ ಹೊಂದಿದ 1 ರು. ನಾಣ್ಯದ ಚಿತ್ರವನ್ನು ಬಳಸಬೇಕು. ತೈಲ ನಿಕ್ಷೇಪ ವ್ಯವಸ್ಥೆಯಾದ ಸಾಗರ ಸಾಮ್ರಾಟ ಚಿತ್ರ ಕೂಡ ಇರಬೇಕು. ಭಾರತದ 15 ಭಾಷೆಗಳಲ್ಲಿ ನೋಟಿನ ಮೌಲ್ಯವಿರಬೇಕು. ಈ ನೋಟು ನಸುಗೆಂಪು ಹಸಿರು ಬಣ್ಣದಲ್ಲಿರಬೇಕು ಎಂದು ಸೂಚಿಸಲಾಗಿದೆ.