ಬೆಂಗಳೂರು(ಜು.26): ದೇಶದಲ್ಲಿ ನವೀಕರಣ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ನೈಸರ್ಗಿಕ ಇಂಧನ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಕರ್ನಾಟಕ ಹಸಿರು ಇಂಧನ ಉತ್ಪಾದನೆಯಲ್ಲಿ ತಮಿಳುನಾಡನ್ನು ಹಿಂದಿಕ್ಕಿ ನಂಬರ್ 1ನೇ ಸ್ಥಾನ ಗಳಿಸಿದೆ. 

ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 12.3 ಗಿಗಾವ್ಯಾಟ್ ನವೀಕರಣ ಇಂಧನ ಉತ್ಪಾದನೆಯಾಗಿದ್ದು, ಅವುಗಳಲ್ಲಿ 5 ಗಿಗಾವ್ಯಾಟ್ 2017-18ರಲ್ಲಿ ಉತ್ಪಾದನೆಯಾಗಿದೆ ಎಂದು ಇಂಧನ ಆರ್ಥಿಕ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ನವೀಕರಣ ಇಂಧನ ಉತ್ಪಾದನೆಗೆ ಕರ್ನಾಟಕ ಹೆಚ್ಚು ಒತ್ತು ನೀಡುತ್ತಿರುವುದರಿಂದ ವಿದ್ಯುತ್ ಆಮದು ಮಾಡಿಕೊಳ್ಳುವುದರ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ಬದಲಾಗಿ ನವೀಕರಣ ಇಂಧನ ಉತ್ಪಾದನೆಯಿಂದ 2028ರ ವೇಳೆಗೆ ಇಂಧನ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೌರಶಕ್ತಿ ಮತ್ತು ಪವನ ಇಂಧನ ಇಂದು ಕರ್ನಾಟಕದಲ್ಲಿ ಶೇಕಡಾ 27ರಷ್ಟು ಉತ್ಪಾದನೆಯಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಲ್ಲಿದ್ದಲು ಚಾಲಿತ ಥರ್ಮಲ್ ಘಟಕಗಳು ಶೇಕಡಾ 49ರಷ್ಟು ಇಂಧನ ಉತ್ಪಾದಿಸುತ್ತವೆ. ಪರಮಾಣು ಮತ್ತು ವಿದ್ಯುತ್ ಘಟಕಗಳು ಶೇಕಡಾ 12ರಷ್ಟು ಇಂಧನವನ್ನು ಉತ್ಪಾದಿಸುತ್ತಿದೆ ಎಂದು ಕರ್ನಾಟಕ ವಿದ್ಯುತ್ ವಲಯ ಪರಿವರ್ತನೆ ತಿಳಿಸಿದೆ.

ರಾಜ್ಯ ಕಲ್ಲಿದ್ದಲು ಆಧಾರಿತ ಇಂಧನದ ಮೇಲೆ ಅವಲಂಬಿತವಾಗಿರುವುದರಿಂದ ಕಲ್ಲಿದ್ದಲಿನ ಬೆಲೆಪಟ್ಟಿ 2017-18ರಲ್ಲಿ 2,006 ಕೋಟಿಯಿಂದ 9,500 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಡಲ ಮೂಲದ ಕಲ್ಲಿದ್ದಲಿನ ಆಮದಿನ ಬೆಲೆ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಬೇರೆ ದೇಶಗಳಿಂದ ಕಲ್ಲಿದ್ದಲಿನ ಆಮದು 1,364 ಕೋಟಿ ರೂಪಾಯಿ ಹೆಚ್ಚಳವಾಗಿದ್ದು ಅಂತರಾಜ್ಯ ಕಲ್ಲಿದ್ದಲು ಪೂರೈಕೆ ಬೆಲೆ 645 ಕೋಟಿ ರೂಪಾಯಿ ಹೆಚ್ಚಳವಾಗಿದೆ.