ಬೆಂಗಳೂರು(ಮಾ.28): ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದು, ಆ ಆದೇಶ ಹಿಂಪಡೆಯುವರೆಗೂ ಬ್ಯಾಂಕುಗಳು ಸಾಲಗಾ​ರರಿಂದ ಸಾಲ ವಸೂಲಾತಿ ಹಾಗೂ ಅವರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಹೈಕೋರ್ಟ್‌ ಮಹತ್ವದ ಮಧ್ಯಂತರ ಆದೇಶ ಮಾಡಿದೆ.

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನವರು ತಮ್ಮ ಆಸ್ತಿಯನ್ನು ಹರಾಜು ಹಾಕಲು ಮುಂದಾಗಿರುವ ಕ್ರಮವನ್ನು ಪ್ರಶ್ನಿಸಿ ಮುದ್ದಯ್ಯ ಅಮರಯ್ಯ ಹಿರೇಮಠ ಮತ್ತಿತರರು ಸಲ್ಲಿಸಿದ್ದ ಐದು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶವನ್ನು ಮಾಡಿದೆ.

ಕೊರೋನಾ ವೈರಸ್‌ ಸೋಂಕು ಹರಡುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಲಾಕ್‌ಡೌನ… ಮಾಡಿ ಮಾ.23ರಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಪ್ರಧಾನ ಮಂತ್ರಿಗಳು ಸಹ ಜನರು ಮನೆಯಿಂದ ಹೊರಗೆ ಬರಬಾರದು ಎಂದು ಮನವಿ ಮಾಡಿದ್ದಾರೆ. ಇದರಿಂದ ಯಾರೂ ಸಹ ಹೊರಗಡೆ ಓಡಾಡಲು ಸಾಧ್ಯವಿಲ್ಲದಂತಾಗಿದೆ. ವಿವಿಧ ಇಲಾಖೆಗಳ ಕಾರ್ಯ ನಿರ್ವಹಣೆ ಸ್ಥಗಿತಗೊಂಡಿದೆ. ಇದರಿಂದ ಸಾಲ ಮರುಪಾವತಿ ವಿಚಾರದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕಿನವರು ತಮ್ಮ ಆಸ್ತಿಯನ್ನು ಹರಾಜು ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಹೀಗಾಗಿ ತಮ್ಮ ಆಸ್ತಿಯ ಹರಾಜು ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅವರ ವಾದ ಹಾಗೂ ರಾಜ್ಯ ಸರ್ಕಾರ ಆದೇಶ ಪರಿಗಣಿಸಿದ ನ್ಯಾಯಪೀಠ, ಕೋರೋನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್‌ ಆದೇಶ್‌ ಮಾಡಿದೆ. ಕೆಲವೊಂದು ಅಗತ್ಯ ಸೇವೆಗಳನ್ನು ಕಲ್ಪಿಸಲು ಅನುಮತಿ ನೀಡಿದೆ. ಅದರಂತೆ ಬ್ಯಾಂಕ್‌ ಸೇವೆಗಳಲ್ಲಿ ಹಣ ಡ್ರಾ ಮಾಡಲು ಮತ್ತು ಎಟಿಎಂ ಯಂತ್ರಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಆದರೆ, ಸಾಲ ವಸೂಲಾತಿ ಮತ್ತು ಸಾಲಗಾರರ ಆಸ್ತಿ ಹರಾಜು ಹಾಕುವುದಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ ಸಾಲ ವಸೂಲಾತಿ ಮತ್ತು ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವುದು ಸರ್ಕಾರದ ಆದೇಶದ ಉಲ್ಲಂಘನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸಬಹುದಾಗಿದೆ. ಬ್ಯಾಂಕುಗಳು ಸಾಲ ವಸೂಲಾತಿ ಪ್ರಕ್ರಿಯೆ ನಡೆಸುತ್ತಿರುವುದು ಮನೆಯಲ್ಲಿ ಇರುವವರು ಹೊರಗಡೆ ಬಂದು ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋಗುವಂತೆ ಮಾಡುವುದಾಗಿದೆ. ಬ್ಯಾಂಕುಗಳು, ಇತರೆ ವಾಣಿಜ್ಯ ಸಂಸ್ಥೆಗಳು, ಶಾಸನಾತ್ಮಕ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ಸರ್ಕಾರದ ಆದೇಶವನ್ನು ಪಾಲಿಸಬೇಕಾಗುತ್ತದೆ ಹಾಗೂ ಅದನ್ನು ಜಾರಿ ಮಾಡಲು ಪೂರಕ ಸಹಕಾರ ನೀಡಬೇಕಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ಬ್ಯಾಂಕಿನವರು ಅರ್ಜಿದಾರರ ವಸೂಲಾತಿ ಪ್ರಕ್ರಿಯೆ ನಡೆಸಿರುವುದು ಸರ್ಕಾರದ ಆದೇಶ ಉಲ್ಲಂಘನೆಯಾಗಿದೆ. ಲಾಕ್‌ಡೌನ್‌ ಆದೇಶ ಹಿಂಪಡೆಯುವವರೆಗೆ ಸಾಲ ವಸೂಲಾತಿ ಹಿನ್ನೆಲೆಯಲ್ಲಿ ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿತು.

ಜತೆಗೆ ಅರ್ಜಿದಾರರ ಆಸ್ತಿಯನ್ನು ಸಂಬಂಧಪಟ್ಟಬ್ಯಾಂಕುಗಳು ಹರಾಜು ಹಾಕುವ ಪ್ರಕ್ರಿಯೆಗೆ ತಡೆ ನೀಡಿದ್ದು, ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಕಳುಹಿಸಿಕೊಡಲು ರಿಜಿಸ್ಟ್ರಾರ್‌ಗೆ ಸೂಚಿಸಿದೆ.