*  ದೇಶದಲ್ಲಿ ಅತೀ ಚಿನ್ನ ಉತ್ಪಾದನೆ ‌ಮಾಡುವ ಗಣಿ*  ಹಟ್ಟಿ ‌ಕಂಪನಿಯಲ್ಲಿ ನಿತ್ಯವೂ 7-8 ಕೆಜಿ‌‌ ಚಿನ್ನ ಸಿಗತ್ತೆ *  ಬಂಗಾರ ಸಿಗುವ ಕಂಪನಿಯ ಎಲ್ಲಿದೆ ಗೊತ್ತಾ?

ವರದಿ: ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಮೇ.03): ದೇಶದಲ್ಲೇ(India) ಅತೀ ಹೆಚ್ಚು ಚಿನ್ನ ಉತ್ಪಾದನೆ ಆಗುವುದು ಹಟ್ಟಿಯಲ್ಲಿ(Hatti). ಹಟ್ಟಿಯಲ್ಲಿ ಉತ್ಪಾದನೆಗೊಂಡ ಬಂಗಾರಕ್ಕೆ ಇಡೀ ದೇಶದ ತುಂಬಾ ಭಾರೀ ಬೇಡಿಕೆಯಿದೆ. ಆಭರಣ ಧರಿಸುವ ಪ್ರತಿಯೊಬ್ಬರು ಚಿನ್ನ ಸಿಗುವ ಕಂಪನಿ ನಮ್ಮ ರಾಜ್ಯದಲ್ಲಿ ಇದೆ ಎಂದು ಹೆಮ್ಮೆಪಡುತ್ತಾರೆ. ಅದರ ಜೊತೆಗೆ ಚಿನ್ನ ಹೇಗೆ ತಯಾರಿಸುತ್ತಾರೆ. ಎಂಬ ಹತ್ತಾರು ಕುತೂಹಲ ಎಲ್ಲಿಗೂ ಇರುತ್ತೆ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹಟ್ಟಿ ಚಿನ್ನದ ಗಣಿಯ ಇತಿಹಾಸ: 

ಹಟ್ಟಿ ಚಿನ್ನದ ಗಣಿಯಲ್ಲಿ(Hatti Gold Mines) ಅಶೋಕನ ಕಾಲಕ್ಕಿಂತಲ್ಲೂ ಪೂರ್ವದಲ್ಲಿ ಚಿನ್ನದ ಗಣಿಗಾರಿಕೆ(Gold Mining) ನಡೆಯುತ್ತಿತ್ತು ಎಂಬ ಪುರಾವೆಗಳು ನಮಗೆ ಸಿಕ್ಕಿವೆ. ಆ ನಂತರ ಬಂದ ರಾಜ್ಯ ಮನೆತನದವರು ಸಹ ಗಣಿಗಾರಿಕೆ ಮಾಡಿದ್ರು. ಅದರಲ್ಲೂ ಹೈದರಾಬಾದ್‌ ನಿಜಾಮರ(Nizam of Hyderabad) ಮಾಲೀಕತ್ವದಲ್ಲಿದ್ದ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಯಲ್ಲಿ ಮೇ ಜಾನ್ ಟೇಲರ್ & ಸನ್ಸ್ ಇವರಿಂದ 1880-1920 ರವರೆಗೆ ಚಿನ್ನದ ಗಣಿಗಾರಿಕೆ ನಡೆಯುತ್ತೆ. ಆ ಬಳಿಕ 8ನೇ ಜುಲೈ 1947 ರಲ್ಲಿ ಹೈದರಾಬಾದ್ ಗೋಲ್ಡ್ ಮೈನ್ ಕಂಪನಿ ನಿಯಮಿತ ಆಗುತ್ತೆ. ಉತ್ಪಾದನೆ ಆಗುವ ಚಿನ್ನದ ಮಾಲೀಕತ್ವವೂ ಹೈದರಾಬಾದ್ ಸರ್ಕಾರ -ಶೇ. 98%ರಷ್ಟು ಷೇರುಗಳು ಸಾರ್ವಜನಿಕ - ಶೇಕಡ 2% ಷೇರುಗಳು ಇರುತ್ತವೆ. ಆ ನಂತರ ಅಂದ್ರೆ 1956ರಂದು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಮೈಸೂರು ಸರ್ಕಾರ ನೋಡಿಕೊಳ್ಳುತ್ತದೆ. 

ಕೊರೋನಾ ಕಾಟ: ಹಟ್ಟಿ ಚಿನ್ನದ ಗಣಿ ಬಂದ್..!

ಪ್ರಸ್ತುತ ಹಟ್ಟಿ ಚಿನ್ನದ ಗಣಿ ಕಂಪನಿಯು ಕರ್ನಾಟಕ ಸರ್ಕಾರದ(Government of Karnataka) ಸ್ವಾಮ್ಯಕ್ಕೆ ಒಳಪಟ್ಟಿದೆ. ಉತ್ಪಾದನೆಗೊಂಡ ಬಂಗಾರದಲ್ಲಿ ಕರ್ನಾಟಕ ಸರ್ಕಾರ 74.34% ಕೆಎಸ್‌ಐಐಡಿಸಿ 19.41% ಕೆಎಸ್‌ಎಂಸಿಎಲ್ 5.06% ಸಾರ್ವಜನಿಕರ 1.19% ಎಂದು ಹಂಚಿಕೆ ‌ಮಾಡಲಾಗಿದೆ.

ಎಲ್ಲಿ ಬರುತ್ತೆ ಈ ಹಟ್ಟಿ ಚಿನ್ನದ ಗಣಿ ?

ರಾಯಚೂರು(Raichur) ಜಿಲ್ಲೆ ‌ಲಿಂಗಸೂಗೂರು(Lingsugur) ತಾಲೂಕಿನ ಹಟ್ಟಿ ಎಂಬ ಪಟ್ಟಣದಲ್ಲಿ ಚಿನ್ನದ ಗಣಿಯಿದೆ.ಸದ್ಯ ಹಟ್ಟಿಯಲ್ಲಿ 901 ಮೀಟರ್ ಆಳದಲ್ಲಿ ‌ಚಿನ್ನದ ಅದಿರನ ಗಣಿಗಾರಿಕೆ ನಡೆದಿದೆ. 

ಹಟ್ಟಿ ಚಿನ್ನದ ಗಣಿಯ ಈಗಿನ ಸ್ಥಿತಿಗತಿ

ಹಟ್ಟಿ ಚಿನ್ನದ ಗಣಿ ದೇಶದ ಏಕೈಕ ಚಿನ್ನವನ್ನು ಉತ್ಪಾದಿಸುವ ಸಾರ್ವಜನಿಕ ಉದ್ದಿಮೆಯಾಗಿರುತ್ತದೆ. ಭಾರತದಲ್ಲಿ ವರ್ಷಕ್ಕೆ 850-900 ಮೆಟ್ರಿಕ್ ಟನ್ ಚಿನ್ನದ ಬೇಡಿಕೆ ಇದೆ. ಹಟ್ಟಿ ಚಿನ್ನದ ಗಣಿಯಲ್ಲಿ ವರ್ಷಕ್ಕೆ 1.7-2.0 ಮೆಟ್ರಿಕ್ ಟನ್ ಉತ್ಪಾದನೆ ‌ಮಾಡಲಾಗುವುದು. ಸದ್ಯ ಹಟ್ಟಿ ಮತ್ತು ಹಟ್ಟಿ, ಊಟಿ ಹಾಗೂ ಹೀರಾ-ಬುದ್ದಿನ್ನಿ ಗಣಿಗಳಲ್ಲಿ ಚಿನ್ನದ ಗಣಿಗಾರಿಕೆಯು ಚಾಲ್ತಿಯಲ್ಲಿದೆ. ಪ್ರಸ್ತುತ ಹಟ್ಟಿ ಚಿನ್ನದ ಗಣಿಯ ಆಳ – 901 ಮೀಟರ್ ಗಳಲ್ಲಿ ಗಣಿಗಾರಿಕೆ ‌ನಡೆದಿದೆ. ಹಟ್ಟಿ ಚಿನ್ನದ ಗಣಿ 28 ಲೆವೆಲ್ ಗಳನ್ನು ಹೊಂದಿದ್ದು, ಒಂದು ಲೆವೆಲ್ 30 ಮೀಟರ್ ಆಳವಾಗಿರುತ್ತೆ. ನಿತ್ಯ ಹಟ್ಟಿ ಕಂಪನಿಯಲ್ಲಿ 3845 ಜನರು ಉದ್ಯೋಗ(Job) ಮಾಡುತ್ತಿದ್ದಾರೆ.

ಹತ್ತಾರು ‌ಸಮಸ್ಯೆಗಳ ಮಧ್ಯೆಯೇ ಚಿನ್ನ ತೆಗೆಯುತ್ತಿರುವ ಕಾರ್ಮಿಕರು

ಚಿನ್ನ ನೋಡುವರ ಬದುಕು ಕೂಡ ಚಿನ್ನದಂತೆ ಇರಬೇಕು. ಆದ್ರೆ ದೇಶದಲ್ಲಿ ಅತೀ ಹೆಚ್ಚು ಚಿನ್ನ ಉತ್ಪಾದನೆ ‌ಮಾಡುವರ ಬದುಕು‌ ಮಾತ್ರ ನೀರಿನ ಮೇಲಿನ ಗುಳ್ಳೆಯಂತೆ ಇದೆ. ಚಿನ್ನದ ಅದಿರು ಸ್ಫೋಟ ಮಾಡುವಾಗ ಹತ್ತಾರು ಅಪಘಾತಗಳು ಸಂಭವಿಸಿವೆ. ನೂರಾರು ಕಾರ್ಮಿಕರು ಪ್ರಾಣಬಿಟ್ಟಿದ್ದಾರೆ. ಗಣಿಯಲ್ಲಿ ಹೋದ ಕಾರ್ಮಿಕರು ಪ್ರತಿ ದಿನವೂ ಜೀವ ಪಣಕ್ಕೆ ಇಟ್ಟು ಚಿನ್ನದ ಅದಿರು ತೆಗೆಯುತ್ತಾರೆ. ಅದಿರು ‌ಸ್ಫೋಟಗೊಂಡು ಹತ್ತಾರು ನೂರಾರು ಕಾರ್ಮಿಕರು ವಿವಿಧ ಅಂಗಾಂಗಗಳು ಕಳೆದುಕೊಂಡಿದ್ದಾರೆ. ಆದ್ರೂ ನಾವು ‌ನಿರಂತರವಾಗಿ ಭೂಮಿಯ‌ ಆಳದಲ್ಲಿ ಅಡಗಿರುವ ಚಿನ್ನ ಹೊರ ತೆಗೆಯುತ್ತಿದ್ದೇವೆ.

ಎಷ್ಟು ಅದಿರಿಗೆ ಎಷ್ಟು ಚಿನ್ನ ಸಿಗುತ್ತೆ?

ಹಟ್ಟಿ ಚಿನ್ನದ ಕಂಪನಿಯ ವಿವಿಧ ವಿಭಾಗದಲ್ಲಿ ‌3875 ನೌಕರರು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಾರೆ. ಇದರ ಭಾಗವಾಗಿ ನಿತ್ಯವೂ 7-8 ಕೆಜಿ ಚಿನ್ನವೂ ಉತ್ಪಾದನೆ ಆಗುತ್ತೆ. ಕಾರ್ಮಿಕರು ಭೂಮಿಯ ಆಳದಲ್ಲಿ ಸಿಗುವ ಕಲ್ಲಿನ‌ ಅದರಿ ಸ್ಟೋಟ ಮಾಡುತ್ತಾರೆ. ಆ ಬಳಿಕ ಆ ಕಲ್ಲಿನ ಅದಿರ ಹತ್ತಾರು ವಿಭಾಗದಲ್ಲಿ ಸಂಸ್ಕರಣೆ ‌ಮಾಡುತ್ತಾರೆ. ಆ ಬಳಿಕ ಒಂದು ಅಂದಾಜಿನ ಪ್ರಕಾರ 2021-22ಸಾಲಿನಲ್ಲಿ ಅಂದಾಜು 0.48 ಮೆಟ್ರಿಕ್ ಟನ್ ಅದಿರು ಸಂಸ್ಕರಣೆ ‌ಮಾಡಿದಾಗ 1.24 ರಷ್ಟು ಚಿನ್ನದ ಉತ್ಪಾದನೆ ಆಗುತ್ತೆ ಎಂಬ ಮಾಹಿತಿ ಚಿನ್ನದ ಗಣಿ ನೌಕರರು ತಿಳಿಸಿದ್ದಾರೆ.

ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ಹಟ್ಟಿ ಕಂಪನಿಯಲ್ಲಿನ ಆಸ್ಪತ್ರೆ ಸೌಲಭ್ಯ 

ಹಟ್ಟಿ ಕಂಪನಿಯ ಆಸ್ಪತ್ರೆಯೂ 120 ಹಾಸಿಗೆಯ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಕಂಪನಿಯ ನೌಕರರು ಹಾಗೂ ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರತಿದಿನ ಸುಮಾರು 400-500 ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರಸ್ತುತ 10 ಖಾಯಂ ಮತ್ತು 09 ಗುತ್ತಿಗೆ ವೈದ್ಯರು ಅರ್ಥೋಪಡಿಕ್ಸ್, ಅರಿವಳಿಕೆ, ಜನರಲ್ ಸರ್ಜರಿ, ಮೆಡಿಸಿನ್, ಇಎನ್‌ಟಿ, ಡರ್ಮಟಾಲಜಿ ಮತ್ತು ಪೀಡಿಯಾಟ್ರಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 125 ಪ್ಯಾರಾ ಮೆಡಿಕಲ್ ಮತ್ತು ಇತರೆ ಸಿಬ್ಬಂದಿ ಮತ್ತು ಕಾರ್ಮಿಕರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನೌಷಧಿ ಕೇಂದ್ರದಿಂದ ಸುಮಾರು 3900 ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗೆ ಔಷಧಿಗಳನ್ನು ಪೂರೈಸುತ್ತಿದೆ.100 ಹಾಸಿಗೆಯ ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಮತ್ತು 500/ಕೆಎಲ್ ಉತ್ಪಾದನಾ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಸ್ಥಾಪಿಸಲಾಗಿದೆ. ಆದ್ರೆ ತಜ್ಞ ವೈದ್ಯರ ಕೊರತೆಯಿಂದ ಆಸ್ಪತ್ರೆಯಲ್ಲಿ ಹತ್ತಾರು ಸೌಲಭ್ಯಗಳು ಇದ್ರೂ ಕಾರ್ಮಿಕರಿಗೆ ಸಿಗದಂತೆ ಆಗಿದೆ.

ಶಿಕ್ಷಣ ಕ್ಷೇತ್ರದ ಕಲ್ಯಾಣ ಕಾರ್ಯಕ್ರಮಗಳು

ಹಟ್ಟಿ ಚಿನ್ನದ ಗಣಿ ಕಂಪನಿಯು ಸಂಪೂರ್ಣ ಅನುದಾನಿತ ಕೇಂದ್ರೀಯ ವಿದ್ಯಾಲಯವನ್ನು(Kendriya Vidyalaya) ಹೊಂದಿರುತ್ತದೆ. ಸದರಿ ವಿದ್ಯಾಲಯವು 2015 ರಿಂದ ಸೇವೆ ಸಲ್ಲಿಸುತ್ತಿದ್ದು, ಮುಖ್ಯವಾಗಿ ನೌಕರರ ಮತ್ತು ಇತರರ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತಿದೆ. ಪ್ರಸ್ತುತ ವಿದ್ಯಾಲಯವು1 ನೇ ತರಗತಿಯಿಂದ 7ನೇ ತರಗತಿಯವರೆಗೆ ಎರಡು ವಿಭಾಗಗಳು ಹಾಗೂ 8ನೇ ತರಗತಿಯಿಂದ 10 ನೇ ತರಗತಿಯವರೆಗೆ ಒಂದು ವಿಭಾಗವನ್ನು ಹೊಂದಿದ್ದು, ಒಟ್ಟು 788 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ತಾಂತ್ರಿಕ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೌಕರರ ಮಕ್ಕಳಿಗೆ ಮಾಸಿಕ ರೂ.600 ರಂತ ಹೆಣ್ಣು ಮಕ್ಕಳಿಗೆ ಹಾಗೂ ರೂ.400 ಗಳಂತೆ ಗಂಡು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಎಲ್ಲಾ ಸ್ಥಳೀಯ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಪ್ರಮಾಣ ಪತ್ರದೊಂದಿಗೆ ಬೆಳ್ಳಿ ಪದಕವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.