ಬೆಂಗಳೂರು+[ಸೆ.29]: ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ತರಕಾರಿಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ವಿಜಯದಶಮಿ, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹೊತ್ತಿನಲ್ಲೇ ಚಿಲ್ಲರೆ ಮಾರುಕಟ್ಟೆವ್ಯಾಪಾರಿಗಳು ತರಕಾರಿ ದರ ಹೆಚ್ಚಿಸಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ಇತ್ತೀಚೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಉಂಟಾದ ಭೀಕರ ಪ್ರವಾಹ ಪರಿಣಾಮ ಹೊರರಾಜ್ಯಗಳಿಂದ ಬರುತ್ತಿದ್ದ ತರಕಾರಿಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ಕೊಪ್ಪಳ, ಗದಗ, ರಾಯಚೂರು, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ನೆರೆ ಮತ್ತು ಮಳೆಯಿಂದಾಗಿ ತರಕಾರಿ ಬೆಳೆಗಳು ನೆಲಕಚ್ಚಿದ್ದು ಬೆಲೆ ಏರಿಕೆಯತ್ತ ಸಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ 45-55 ರು., ಬದನೆಕಾಯಿ 18ರಿಂದ 20 ರು., ಟೊಮೆಟೊ ಕೆ.ಜಿ. 17-18 ರು., ಕ್ಯಾರೆಟ್‌ ಕೆ.ಜಿ. 36 ರು., ಹೀರೇಕಾಯಿ ಕೆ.ಜಿ. 28 ರು., ಎಲೆಕೋಸು 15 ರು., ಹೂ ಕೋಸು ಕೆ.ಜಿ. 15-20 ರು., ಆಲೂಗಡ್ಡೆ ಕೆ.ಜಿ. 16 ರು., ಬೀಟ್‌ರೂಟ್‌ ಕೆ.ಜಿ. 24 ರು., ಹಸಿಮೆಣಸಿನಕಾಯಿ ಕೆ.ಜಿ. 28 ರು.ಗೆ ಮಾರಾಟವಾಗುತ್ತಿದೆ. ಮಳೆಯಿಂದ ಹುರುಳಿಕಾಯಿ ಇಳುವರಿ ಕುಂಠಿತವಾಗಿದ್ದು, ಸಾಧಾರಣ ಕೆ.ಜಿ. 18 ರು., ಗುಣಮಟ್ಟದ್ದು ಕೆ.ಜಿ. 36-40 ರು.ಗೆ ಖರೀದಿಯಾಗುತ್ತಿದೆ. ಇದೀಗ ಬರುವ ತರಕಾರಿ ಪ್ರಮಾಣದಲ್ಲಿ ಸುಧಾರಣೆಯಾಗಿದೆ ಎಂದು ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿ ರಾಧಾಕೃಷ್ಣ ಮಾಹಿತಿ ನೀಡಿದರು.

ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಬಳ್ಳಾರಿಯಿಂದ ಮೆಣಸಿನಕಾಯಿ, ರಾಯಚೂರಿನಿಂದ ಟೊಮೆಟೊ, ಬೆಳಗಾವಿಯಿಂದ ಶುಂಠಿ ಹೀಗೆ ವಿವಿಧ ಜಿಲ್ಲೆಗಳಿಂದ ತರಕಾರಿಗಳು ಬರುತ್ತಿದ್ದವು. ಆದರೆ, 15 ದಿನಗಳಿಂದ ತರಕಾರಿ ಕಡಿಮೆ ಬರುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಬೆಂಗಳೂರಿನ ಸುತ್ತಮುತ್ತಲಿನÜ ಜಿಲ್ಲೆಗಳಿಂದ ಬರುವ ತರಕಾರಿಗಳನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರ ಟೊಮೆಟೊ 15 ರು. ಇದ್ದದ್ದು 30 ರು., ಹಸಿಮೆಣಸಿನಕಾಯಿ 30 ರು.ನಿಂದ 60ಕ್ಕೆ ಏರಿಕೆ ಕಂಡಿದೆ. ಬಹುತೇಕ ತರಕಾರಿ ಬೆಲೆಯಲ್ಲಿ 5 ರಿಂದ 10 ರು. ಜಾಸ್ತಿಯಾಗಿದೆ ಎನ್ನುತ್ತಾರೆ ಕೆ.ಆರ್‌. ಮಾರುಕಟ್ಟೆವ್ಯಾಪಾರಿ ಸರವಣ.

ಹಾಪ್‌ಕಾಮ್ಸ್‌ -ತರಕಾರಿ ಬೆಲೆ (ಕೆ.ಜಿ.)

ಹುರಳಿಕಾಯಿ 45 ರು.

ಗುಂಡು ಬದನೆ 40 ರು.

ಹಸಿಮೆಣಸಿನಕಾಯಿ 52 ರು.

ಊಟಿ ಕ್ಯಾರೆಟ್‌ 48 ರು.

ನಾಟಿ ಕ್ಯಾರೆಟ್‌ 46 ರು.

ನುಗ್ಗೇಕಾಯಿ 60 ರು.

ಹಾರಿಕಾಟ ಬೀನ್ಸ್‌ 48 ರು.

ಹೀರೇಕಾಯಿ 48 ರು.

ಈರುಳ್ಳಿ 64 ರು.

ಟೊಮೆಟೊ 27 ರು.

ಕೆ.ಆರ್‌. ಮಾರುಕಟ್ಟೆಬೆಲೆ

ಈರುಳ್ಳಿ 60-70 ರು.

ಬದನೆಕಾಯಿ 40-45 ರು.

ಹುರುಳಿಕಾಯಿ 50-55 ರು.

ಟೊಮೆಟೊ 30-35 ರು.

ಕ್ಯಾರೆಟ್‌ 45- 50 ರು.

ಹೀರೇಕಾಯಿ 50-55 ರು.

ಎಲೆಕೋಸು 30-40 ರು.

ಹೂ ಕೋಸು 35-45 ರು.

ಆಲೂಗಡ್ಡೆ 30-35 ರು.

ಬೀಟ್‌ರೂಟ್‌ 50-60 ರು.

ಹಸಿಮೆಣಸಿನಕಾಯಿ 55-60 ರು.

ಬೇಡಿಕೆಗೆ ತಕ್ಕಂತೆ ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಾಗದ ಕಾರಣ ಬೆಲೆ ಏರಿಕೆಯಾಗಿದೆ. ಇದೀಗ ಧಾರವಾಡ, ಚಿತ್ರದುರ್ಗದಿಂದ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಬಹುದು. ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಕಂಡಿದೆ.

- ಬಿ.ಎನ್‌. ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್‌