Asianet Suvarna News Asianet Suvarna News

ಕರ್ನಾಟಕ ಬಜೆಟ್ 2024: ಕ್ರೀಡಾ ಕ್ಷೇತ್ರಕ್ಕೆ ಬಂಪರ್, ಒಲಿಂಪಿಕ್ಸ್‌ನಲ್ಲಿ ಸಾಧಕರಿಗೆ ಕೋಟಿ-ಕೋಟಿ ಪ್ರೋತ್ಸಾಹಧನ

ಜಾಗತಿಕ ಕ್ರೀಡಾಹಬ್ಬ ಎನಿಸಿಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ನಗದು ಬಹುಮಾನವನ್ನು ಸಿದ್ದರಾಮಯ್ಯನವರು ಘೋಷಿಸಿದ್ದಾರೆ.

Karnataka Budget 2024 CM Siddaramaiah Announce Sports City in Bengaluru and 6 Crore rupees for Paris Olympics Gold medalist kvn
Author
First Published Feb 16, 2024, 12:46 PM IST

ಬೆಂಗಳೂರು(ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 15ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ವರ್ಗಗಳನ್ನು ಹಾಗೂ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದೇ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಡೆಯುವುದರಿಂದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಕ್ರೀಡಾ ಕ್ಷೇತ್ರಕ್ಕೆ ಏನೆಲ್ಲಾ ಭಾಗ್ಯಗಳನ್ನು ಕರುಣಿಸಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿತ್ತು. ಅದೆಲ್ಲದಕ್ಕೂ ಮುಖ್ಯಮಂತ್ರಿಗಳು ತೆರೆ ಎಳೆದಿದ್ದು, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವವರಿಗೆ ಬಂಪರ್ ಬಹುಮಾನ ಘೋಷಿಸಿದ್ದಾರೆ.

ಹೌದು, ಜಾಗತಿಕ ಕ್ರೀಡಾಹಬ್ಬ ಎನಿಸಿಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ನಗದು ಬಹುಮಾನವನ್ನು ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟುಗಳಿಗೆ 06 ಕೋಟಿ ರುಪಾಯಿ, ಬೆಳ್ಳಿ ವಿಜೇತರಿಗೆ 04 ಕೋಟಿ ರುಪಾಯಿ ಹಾಗೂ ಕಂಚು ಗೆಲ್ಲುವ ಒಲಿಂಪಿಯನ್‌ಗಳಿಗೆ 03 ಕೋಟಿ ರುಪಾಯಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಇನ್ನು ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 35 ಲಕ್ಷ ರುಪಾಯಿ ನಗದು, ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರುಪಾಯಿ ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರುಪಾಯಿ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದ್ದಾರೆ
 
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಕ್ಕಿದ್ದಿದು:

* ಬೆಂಗಳೂರು ಉತ್ತರ ತಾಲೂಕಿನಲ್ಲಿ ಲಭ್ಯವಿರುವ ಅಂದಾಜು 70 ಎಕರೆ ನಿವೇಶನದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯವನ್ನು ಒಳಗೊಂಡ ಕ್ರೀಡಾ ನಗರ(Sports City) ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದಾಗಿ ಘೋಷಣೆ.

* ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ಉದ್ದೇಶದಿಂದ 04 ಸ್ಥಳಗಳಲ್ಲಿ ಬಹುಕ್ರೀಡಾ ಸೌಲಭ್ಯಗಳನ್ನು ಒಳಗೊಂಡ ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಘೋಷಣೆ.

* ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತಿ ವರ್ಷ ಒಂದು ರಾಜ್ಯ ಮಟ್ಟದ ಒಲಿಂಪಿಕ್ಸ್ ಮತ್ತು 14 ವರ್ಷ ವಯೋಮಾನದ ಒಳಗಿನವರಿಗೆ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗುವುದು.

* ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಮಯದಲ್ಲಿ ಗಾಯಗೊಂಡಲ್ಲಿ ಅವರ ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮೆ ಸೌಲಭ್ಯವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು.

* ಕಳೆದ ಸಾಲಿನ ಆಯವ್ಯಯದಲ್ಲಿ ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಹುದ್ದೆಗಳನ್ನು ಮೀಸಲಿಡಲಾಗುವುದೆಂದು ಘೋಷಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ಇತರೆ ಇಲಾಖೆಗಳ ನೇಮಕಾತಿಗಳಲ್ಲಿಯೂ ಶೇ.2ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು ಎಂದು ಘೋಷಿಸಿದ್ದಾರೆ.   

* ರಾಜ್ಯದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರೈಫಲ್ ಶೂಟಿಂಗ್ ಅಸೋಸಿಯೇಷನ್, ಹಾಕಿ ಕರ್ನಾಟಕ, ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್, ಆರ್ಚರಿ ಅಸೋಸಿಯೇಷನ್, ಅಥ್ಲೆಟಿಕ್ಸ್ ಅಸೋಸಿಯೇಷನ್, ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಕಾಡೆಮಿ, ಸೈಕ್ಲಿಂಗ್ ಅಕಾಡೆಮಿ ವಿಜಯಪುರ ಹಾಗೂ ಫೆನ್ಸಿಂಗ್ ಅಸೋಸಿಯೇಷನ್‌ಗಳಿಗೆ ಒಟ್ಟಾರೆ 12 ಕೋಟಿ ರುಪಾಯಿ ಅನುದಾನ ನೀಡಲಾಗುವುದು ಘೋಷಿಸಿದ್ದಾರೆ.

* ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರುಪಾಯಿ ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರುಪಾಯಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡವನ್ನು ನಿರ್ಮಿಸಲಾಗುವುದು. ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ದಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ 10 ಕೋಟಿ ರುಪಾಯಿ ಒದಗಿಸಲಾಗುವುದು.
 

Follow Us:
Download App:
  • android
  • ios