ಮಂಗಳೂರು (ಜೂ. 08):  ದೇಶದ ಅಗ್ರಮಾನ್ಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ ಮಾ.31ಕ್ಕೆ ಕೊನೆಗೊಂಡ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ .431.78 ಕೋಟಿ ನಿವ್ವಳ ಲಾಭ ಘೋಷಿಸಿದೆ. ಅಂತೆಯೇ ವಿತ್ತೀಯ ವರ್ಷದ 4ನೇ ತ್ರೈಮಾಸಿಕ ಅಂತ್ಯಕ್ಕೆ .27.31 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕ್‌ ಆಡಳಿತ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ವರದಿ ಬಿಡುಗಡೆಗೊಳಿಸಿದರು.

ಬ್ಯಾಂಕ್‌ನ ಒಟ್ಟು ವ್ಯವಹಾರ .1,28,749.42 ಕೋಟಿ ತಲುಪಿದ್ದು, ಇದು ವಾರ್ಷಿಕ ಶೇ.4.44ರ ಬೆಳವಣಿಗೆಯನ್ನು ಸಾ​ಧಿಸಿದೆ. ಬ್ಯಾಂಕ್‌ ಠೇವಣಿ .68,452 ಕೋಟಿಯಿಂದ ವೃದ್ಧಿಗೊಂಡು .71,785.15 ಕೋಟಿ ತಲುಪಿದೆ. .54,828 ಕೋಟಿಗಳಷ್ಟಿದ್ದ ಬ್ಯಾಂಕ್‌ನ ಮುಂಗಡ .56,964.27 ಕೋಟಿಗೆ ತಲುಪಿದೆ.

80 ದಿನ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ!

ಬ್ಯಾಂಕ್‌ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಠೇವಣಿಗಳು ಒಟ್ಟು ಠೇವಣಿಗಳ ಶೇ.28.91ರಷ್ಟಕ್ಕೆ ತಲುಪಿದ್ದು, ಇದು ಕಳೆದ ವರ್ಷಾಂತ್ಯಕ್ಕೆ ಶೇ.28.06 ಆಗಿತ್ತು. ಬ್ಯಾಂಕಿನ ನಿರ್ವಹಣಾ ಲಾಭ ಶೇ.14.27ರ ವೃದ್ಧಿಯೊಂದಿಗೆ .1,656.77 ಕೋಟಿ ತಲುಪಿದೆ. ಈ ಮೂಲಕ ಬ್ಯಾಂಕ್‌ನ ಪ್ರಾವಿಜನ್‌ ಕವರೇಜ್‌ ರೇಶಿಯೋ ಉತ್ತಮಗೊಂಡಿದ್ದು ಶೇ.64.70 ಗೆ ತಲುಪಿದೆ.

ಕಳೆದ ವಿತ್ತೀಯ ವರ್ಷ ಆರ್ಥಿಕ ರಂಗಕ್ಕೆ ಹಲವು ಸವಾಲುಗಳನ್ನು ಒಡ್ಡಿದ ವರ್ಷ. ಆರ್ಥಿಕ ಸಂಕಷ್ಟದ ಈ ಸಮಯದಲ್ಲೂ ಬ್ಯಾಂಕ್‌ನ ಉತ್ತಮ ಕಾರ್ಯಕ್ಷಮತೆಯಿಂದಾಗಿ ನಾವು ಉತ್ತಮ ಫಲಿತಾಂಶವನ್ನು ನೀಡಲು ಸಾಧ್ಯವಾಯಿತು ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ತಿಳಿಸಿದರು.