ನವದೆಹಲಿ[ಜ.02]: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ವಿಮಾನಗಳ ಚಾಲನೆಗೆ ಬಳಸುವ ಇಂಧನ ದರವನ್ನು ಶೇ.14.7ರಷ್ಟುಕಡಿತಗೊಳಿಸಿವೆ. ಇದರಿಂದಾಗಿ ವೈಮಾನಿಕ ಇಂಧನ (ಏವಿಯೇಷನ್‌ ಟರ್ಬೈನ್‌ ಫ್ಯುಯೆಲ್‌ ಅಥವಾ ಎಟಿಎಫ್‌)ದ ಬೆಲೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳಿಗಿಂತ ಅಗ್ಗವಾಗಿದೆ.

1 ಕಿಲೋಲೀಟರ್‌ (ಸಾವಿರ ಲೀಟರ್‌) ವೈಮಾನಿಕ ಇಂಧನದ ಬೆಲೆಯನ್ನು ತೈಲ ಕಂಪನಿಗಳು 9,990 ರು.ನಷ್ಟುಕಡಿತಗೊಳಿಸಿವೆ. ಇದರಿಂದಾಗಿ ಸಾವಿರ ಲೀಟರ್‌ ಇಂಧನದ ಬೆಲೆ 58,060.97 ರು.ಗೆ ಇಳಿಕೆಯಾಗಿದೆ. ಅಂದರೆ 1 ಲೀಟರ್‌ಗೆ 58.06 ರುಪಾಯಿ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 68.65 ಹಾಗೂ ಡೀಸೆಲ್‌ ಬೆಲೆ 62.66 ರು. ಇದೆ. ಅದಕ್ಕೆ ಹೋಲಿಸಿದರೆ ವೈಮಾನಿಕ ಇಂಧನ ಬೆಲೆ ಕಡಿಮೆ. ಸಬ್ಸಿಡಿಯೇತರ ಸೀಮೆಎಣ್ಣೆ ಬೆಲೆ ಲೀಟರ್‌ಗೆ 56.59 ರು. ಇದ್ದು, ಅದಕ್ಕಿಂತ ವೈಮಾನಿಕ ಇಂಧನ ಕೊಂಚ ದುಬಾರಿ.