2 ತಿಂಗಳಿನಿಂದ ನಾಪತ್ತೆಯಾಗಿದ್ದ ಜಾಕ್ ಮಾ ಪತ್ತೆ!
ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಆಲಿಬಾಬಾ ಸಂಸ್ಥೆ ಸಂಸ್ಥಾಪಕ| ಚೀನಾ ಅಧ್ಯಕ್ಷರೊಂದಿಗೆ ನಡೆದಿದ್ದ ವಿವಾದದ ಬಳಿಕ ನಾಪತ್ತೆಯಾಗಿದ್ದ ಜಾಕ್ ಮಾ| ಎರಡು ತಿಂಗಳ ಬಳಿಕ ಮತ್ತೆ ಕಾಣಿಸಿಕೊಂಡ ಚೀನಾದ ಉದ್ಯಮಿ

ಬೀಜಿಂಗ್(ಜ.20):ಚೀನಾದ ಅತ್ಯಂತ ಶ್ರೀಮಂತ ಉದ್ಯಮಿ ಜಾಕ್ ಮಾ ಸುಮಾರು ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಹಲವಾರು ವದಂತಿಗಳೂ ಸದ್ದು ಮಾಡಿದ್ದವು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಜಾಕ್ ಮಾ ಜಗತ್ತಿನೆದುರು ಕಾಣಿಸಿಕೊಂಡಿದ್ದಾರೆ. ಚೀನಾ ಸರ್ಕಾರದ ಮಾಧ್ಯಮ ಗ್ಲೋಬಲ್ ಟೈಮ್ಸ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಜಾಖ್ ಮಾ ಸುಮಾರು ನೂರು ಗ್ರಾಮೀಣ ಶಿಕ್ಷಕರೊಂದಿಗೆ ಆನ್‌ಲೈನ್ ಮೂಲಕ ಸಂಭಾಷಣೆ ನಡೆಸುವ ದೃಶ್ಯಗಳಿವೆ.
ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಜಾಕ್ ಮಾ
ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗಿನ ವಿವಾದದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಕಳೆದ ಎರಡು ತಿಂಗಳಿನಿಂದ ಅವರ ನಾಪತ್ತೆ ಕುರಿತಾಗಿ ನಾನಾ ವದಂತಿಗಳು ಹರಿದಾಡಿದ್ದವು. ಅಂತಿಮವಾಗಿ ಚೀನಾ ಅವರನ್ನು ಬಂಧಿಸಿದೆ ಅಥವಾ ಅಪಹರಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
'ಇಂಗ್ಲೀಷ್ ಶಿಕ್ಷಕನಿಂದ ಉದ್ಯಮಿಯಾದ್ರು'
ಜಾಕ್ ಮಾರ ವಿಡಿಯೋ ಶೇರ್ ಮಾಡಿಕೊಂಡಿರುವ ಗ್ಲೋಬಲ್ ಟೈಮ್ಸ್ ಅವರು ಇಂಗ್ಲೀಷ್ ಶಿಕ್ಷಕನಿಂದ ಉದ್ಯಮಿಯಾಗಿ ಬೆಳೆದರು ಎಂದು ತಿಳಿಸಿದೆ. ಜಾಕ್ ಮಾ ಬಗ್ಗೆ ಟ್ವೀಟ್ ಮಾಡಿರುವ ಗ್ಲೋಬಲ್ ಟೈಮ್ಸ್ 'ಇಂಗ್ಲೀಷ್ ಶಿಕ್ಷಕನಾಗಿದ್ದ ಜಾಕ್ ಮಾ ಆಲಿಬಾಬಾ ಸಂಸ್ಥಾಪಕರಾಗಿ ಬೆಳೆದಿದ್ದು, ಅವರು ವಿಡಿಯೋ ಮೂಲಕ ದೇಶದ ನೂರಕ್ಕೂ ಅಧಿಕ ಗ್ರಾಮೀಣ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು. ಕೊರೋನಾ ಮಹಾಮಾರಿ ಆರ್ಭಟ ಕಳೆದ ಬಳಿಕ ನಾವು ಮತ್ತೆ ಸಿಗೋಣ ಎಂದು ಜಾಕ್ ಮಾ ತಿಳಿಸಿದ್ದಾರೆ' ಎಂದು ಬರೆದಿದ್ದಾರೆ.
#Alibaba founder Jack Ma Yun @JackMa, the English teacher turned entrepreneur, met with 100 rural teachers from across the country via video link on Wednesday. “We’ll meet again after the [COVID-19] epidemic is over,” he said to them: report pic.twitter.com/oj2JQqZGnI
— Global Times (@globaltimesnews) January 20, 2021
ಕೊನೆಯ ಬಾರಿ ನವೆಂಬರ್‌ನಲ್ಲಿ ಕಾಣಿಸಿಕೊಂಡಿದ್ದರು.
ಆಫ್ರಿಕಾದ ಬ್ಯುಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಟಿವಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ತಪ್ಪದೇ ಪಾಲ್ಗೊಳ್ಳುತ್ತಿದ್ದ. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸಿ 1.5 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡುವ ಶೋ ಇದಾಗಿದ್ದು, ಜಾಕ್ ಮಾ ಈ ಬಾರಿ ಗೈರಾಗಿದ್ದರು ಅಲ್ಲದೇ ಏಕಾಏಕಿ ಅವರ ಭಾವಚಿತ್ರವನ್ನು ತೀರ್ಪುಗಾರರ ಅಧಿಕೃತ ಪುಟದಿಂದ ತೆಗೆಯಲಾಗಿತ್ತು. ಅಲ್ಲದೇ ಈ ಬಾರಿ ಜಾಕ್ ಮಾ ಬದಲಿಗೆ ಬೇರೊಬ್ಬ ಅಧಿಕಾರಿಯನ್ನೂ ಆಲಿಬಾಬಾ ಸಂಸ್ಥೆ ಕಳಿಸಿತ್ತು.
ಇನ್ನು ಈ ಕಾರ್ಯಕ್ರಮದ ಫೈನಲ್ ಹಂತ ಅಕ್ಟೋಬರ್ 24ರಂದು ನಡೆದಿತ್ತು. ಹೀಗಿರುವಾಗ ಜಾಕ್ ಮಾ ಚೀನಾದ ಆಡಳಿತ ಮುಖ್ಯಸ್ಥ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸಿ ಮಾತನ್ನಾಡಿದ್ದರು. ಇದಾದ ಬೆನ್ನಲ್ಲೇ ಜಾಕ್ ಮಾರನ್ನು ಬೀಜಿಂಗ್ ಅಧಿಕಾರಿಗಳು ಕರೆದೊಯ್ದಿದ್ದರು. ಅವರ ಕಂಪನಿಯ 37 ಬಿಲಿಯನ್ ಇನಿಶಿಯಲ್ ಪಬ್ಲಿಕ್ ಆಫರ್‌ನ್ನೂ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ ಎಂದು ವರದಿಗಳು ತಿಳಿಸಿದ್ದವು.
ಕೆಲಸದ ಒತ್ತಡ ಹಾಗೂ ಶೆಡ್ಯೂಲ್ ಇಲ್ಲದೇ ಜಾಕ್ ಮಾ 2020ನೇ ವರ್ಷದ ಆಫ್ರಿಕಾದ ಬಿಸಿನೆಸ್ ಹೀರೋಸ್‌ನ ಅಂತಿಮ ತೀರ್ಪುಗಾರರ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಎಂದು ಎಂದು ಅಲಿಬಾಬಾದ ವಕ್ತಾರರು ತಿಳಿಸಿದ್ದರು.
ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿರುವ ಜಾಕ್ ಅವರು ಕೊಡುಗೈ ದಾನಿಯಾಗಿ ಕೂಡಾ ಹೌದು. ಕೊರೋನಾ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮಾಸ್ಕ್ ವಿತರಣೆಗಾಗಿ ಯುರೋಪ್, ಯುಎಸ್ ಗಳಲ್ಲಿ ನೆರವು ನೀಡಿದ್ದರು. ಜಾಕ್ ಮಾ ಸಂಸ್ಥೆ ಮೂಲಕ ಶಿಕ್ಷಣ, ಉದ್ಯಮ, ಮಹಿಳಾ ನಾಯಕತ್ವ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಅಪಾರ ಪ್ರಮಾಣದ ದೇಣಿಗೆ ಮೂಲಕ ನೆರವು ನೀಡಲಾಗುತ್ತಿದೆ.