ನವದೆಹಲಿ(ಜ.20): ಆಸ್ತಿ ಖರೀದಿ ವೇಳೆ 20,000 ರೂ. ಮೀರಿದ ನಗದು ವರ್ಗಾವಣೆ ನಿಮಗೆ ಸಂಕಷ್ಟ ತಂದೊಡ್ಡಬಹುದು. ಕಾರಣ ಈ ವರ್ಗಾವಣೆಯು ಕಾನೂನಿನನ್ವಯ ಅಪರಾಧವಾಗಿದೆ. 

ಈ ರೀತಿಯ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವ ದೆಹಲಿಯ ಆದಾಯ ತೆರಿಗೆ ಇಲಾಖೆ, 20,000 ರೂ. ನಗದು ವ್ಯವಹಾರ ಮಾಡಿದವರಿಗೆ ನೋಟಿಸ್‌ ನೀಡಲು ಮುಂದಾಗಿದೆ. 

ಅಲ್ಲದೇ ಇದೇ ಮಾದರಿಯನ್ನು ದೇಶದ ಇತರ ರಾಜ್ಯಗಳ ಐಟಿ ಇಲಾಖೆಗಳೂ ಅನುಸರಿಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ. 

'ಆಸ್ತಿ ಖರೀದಿ ವೇಳೆ 20,000 ರೂ. ಅಥವಾ ಅದಕ್ಕೂ ಅಧಿಕ ಮೊತ್ತದ ನಗದು ಮೊತ್ತ ನೀಡಿ ನೋಂದಣಿ ಮಾಡಿಸಿಕೊಂಡವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ. 

2015ರಿಂದ 2018ರಲ್ಲಿ ನೋಂದಣಿಯಾಗಿರುವ ಆಸ್ತಿಗಳಲ್ಲಿ ಇಂತಹ ನಗದು ವ್ಯವಹಾರಗಳ ಬಗೆಗಿನ ಮಾಹಿತಿಯನ್ನು ಐಟಿ ಅಧಿಕಾರಿಗಳು ಪರಾಮರ್ಶಿಸುತ್ತಿದ್ದಾರೆ. ಅಲ್ಲದೇ ದೆಹಲಿಯ ಐಟಿ ಇಲಾಖೆ ಈ ಕುರಿತು ಕೆಲವರಿಗೆ ನೋಟಿಸ್ ಕೂಡ ಜಾರಿ ಮಾಡಿದೆ.