2022ಕ್ಕೆ ದೇಶದಲ್ಲಿ 30 ಲಕ್ಷ ಐಟಿ ಉದ್ಯೋಗ ನಷ್ಟ?
* ದೇಶಾದ್ಯಂತ ಭಾರೀ ಪ್ರಮಾಣದ ನಿರುದ್ಯೋಗದ ಸಮಸ್ಯೆ
* ಯಾಂತ್ರೀಕರಣ: 2022ಕ್ಕೆ 30 ಲಕ್ಷ ಐಟಿ ಉದ್ಯೋಗ ನಷ್ಟ?
* ನಾಸ್‌ಕಾಂ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖ
ಮುಂಬೈ(ಜೂ.17): ದೇಶಾದ್ಯಂತ ಭಾರೀ ಪ್ರಮಾಣದ ನಿರುದ್ಯೋಗದ ಸಮಸ್ಯೆ ಇರುವಾಗಲೇ, ಕೈಗಾರಿಕೆಗಳಲ್ಲಿ ವಿಶೇಷವಾಗಿ ತಂತ್ರಜ್ಞಾನದ ಜಾಗದಲ್ಲಿ ಅತಿಯಾದ ಯಾಂತ್ರೀಕರಣದ ಕಾರಣದಿಂದಾಗಿ ದೇಶೀಯ ಸಾಫ್ಟ್ವೇರ್ ಉದ್ಯಮಗಳಲ್ಲಿ 2022ರ ವೇಳೆಗೆ 30 ಲಕ್ಷ ಉದ್ಯೋಗ ಕಡಿತ ಆಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ದೇಶದ ಐಟಿ ವಲಯದಲ್ಲಿ 1.6 ಕೋಟಿ ಉದ್ಯೋಗಿಗಳಿದ್ದಾರೆ. ಈ ಪೈಕಿ 90 ಲಕ್ಷ ಉದ್ಯೋಗಗಳು ಕಡಿಮೆ ಕೌಶಲದವರು ಅಥವಾ ಬಿಪಿಒನವರು ಎಂದು ನಾಸ್‌ಕಾಂ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2022ರ ವೇಳೆಗೆ ಟಿಸಿಎಸ್, ಇಸ್ಫೋಸಿಸ್, ವಿಪ್ರೋ, ಎಚ್ಸಿಎಲ್, ಟೆಕ್ ಮಹಿಂದ್ರಾ ಮತ್ತು ಕಾಜ್ನಿಜಾಂಟ್ ಸೇರಿದಂತೆ ಇನ್ನಿತರ ಕಂಪನಿಗಳು ಕಡಿಮೆ ಕೌಶಲ್ಯ ಹೊಂದಿದ 30 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಇದರಿಂದ ಖಾಸಗಿ ಕಂಪನಿಗಳಿಗೆ ವಾರ್ಷಿಕ 7.3 ಲಕ್ಷ ಕೋಟಿ ರು. ಉಳಿತಾಯವಾಗಲಿದೆ ಎನ್ನಲಾಗಿದೆ.
ಕೆಲಸಕ್ಕಾಗಿ ಖಾಸಗಿ ಕಂಪನಿಗಳು ರೋಬೋಟ್ ಅಥವಾ ಆರ್ಪಿಎ ಎಂಬ ಯಾಂತ್ರಿಕ ಉಪಕರಣಗಳನ್ನು ಬಳಸಿಕೊಳ್ಳುತ್ತಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.