ಇಸ್ರೇಲ್-ಇರಾನ್ ಸಂಘರ್ಷ: ಈ 5 ಭಾರತೀಯ ಕಂಪನಿಗಳ ಷೇರು ಬೆಲೆಯಲ್ಲಿ ಭಾರೀ ಹೆಚ್ಚಳ!
ಇಸ್ರೇಲ್-ಇರಾನ್ ಸಂಘರ್ಷದ ಪರಿಣಾಮ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಕೆಲವು ಭಾರತೀಯ ಕಂಪನಿಗಳ ಲಾಭ ಗಳಿಕೆಯಲ್ಲಿ ಕೂಡ ಹೆಚ್ಚಳವಾಗಲಿದ್ದು, ಅವುಗಳ ಷೇರು ಬೆಲೆ ಏರಿಕೆ ಕಾಣಲಿದೆ.
ನವದೆಹಲಿ (ಏ.22): ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಏಪ್ರಿಲ್ 19ಕ್ಕೆ ಅನ್ವಯವಾಗುವಂತೆಎ ಬ್ರೆಂಟ್ ಕಚ್ಚಾ ತೈಲ ಹಾಗೂ ಅಮೆರಿಕ ಪಶ್ಚಿಮ ಟೆಕ್ಸಾಸ್ ಇಂಟರ್ ಮೀಡಿಯೇಟ್ ಕ್ರೂಡ್ (ಡಬ್ಲ್ಯುಟಿಐ) ಎರಡೂ ಪ್ರತಿ ಬ್ಯಾರಲ್ ಗೆ ಕ್ರಮವಾಗಿ $90 ಹಾಗೂ $85 ಮೇಲ್ಪಟ್ಟು ಟ್ರೇಡ್ ಆಗುತ್ತಿವೆ. ತೈಲ ಬೆಲೆಗಳಲ್ಲಿನ ಏರಿಕೆಯಿಂದ ಅನೇಕ ಪರಿಣಾಮಗಳು ಉಂಟಾಗಲಿವೆ. ತೈಲ ಬೆಲೆಯೇರಿಕೆ ಅನೇಕ ಉತ್ಪನ್ನಗಳ ಬೆಲೆಗಳಲ್ಲಿ ಬದಲಾವಣೆಗೆ ಕಾರಣವಾಗಲಿದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂದಿಗ್ಧತೆ ಹೆಚ್ಚಿದ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಿರಿಯಾದ ಡೆಮಾಸ್ಕಸ್ ನಲ್ಲಿರುವ ತನ್ನ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇರಾನ್ ಇಸ್ರೇಲ್ ಮೇಲೆ 300ಕ್ಕೂ ಅಧಿಕ ಸ್ಫೋಟಕಗಳನ್ನು ಸಿಡಿಸಿದೆ. ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತ ಜನರ ಜೀವನದ ಮೇಲೆ ಅನೇಕ ವಿಧದಲ್ಲಿ ಪರಿಣಾಮ ಬೀರಲಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಗೂ ಕಾರಣವಾಗುತ್ತದೆ. ಇನ್ನೊಂದೆಡೆ ಕಚ್ಚಾ ತೈಲದ ಬೆಲೆಯೇರಿಕೆ ಕೆಲವು ಷೇರುಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗುತ್ತದೆ. ವರದಿಯೊಂದರ ಪ್ರಕಾರ ಕಚ್ಚಾ ತೈಲದ ಬೆಲೆಯೇರಿಕೆಯಿಂದ ಈ ಕೆಳಗಿನ 5 ಕಂಪನಿಗಳ ಷೇರುಗಳ ಬೆಲೆಗಳಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.
1.ಒಎನ್ ಜಿಸಿ: ಸಾರ್ವಜನಿಕ ವಲಯದ ಕಂಪನಿ ಒಎನ್ ಜಿಸಿ ಲಾಭಾಂಶದ ಮೇಲೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಪರಿಣಾಮ ಬೀರಲಿವೆ. ಒಎನ್ ಜಿಸಿ ಅಂಗಸಂಸ್ಥೆಯಾದ ಒಎನ್ ಜಿಸಿ ವಿದೇಶ್ ಲಿಮಿಟೆಡ್ ಒಟ್ಟು ಉತ್ಪಾದನೆ ಮೇಲೆ ಪರಿಣಾಮ ಬೀರುವ ಕಾರಣ ಈ ಬದಲಾವಣೆಯಾಗಲಿದೆ. ಡಬ್ಲ್ಯುಟಿಐ ಕಚ್ಚಾ ತೈಲ ಬೆಲೆಯಲ್ಲಿನ ಯಾವುದೇ ಏರಿಳಿತ ಒನ್ ಜಿಸಿ ಮೇಲೆ ಪರಿಣಾಮ ಬೀರಲು ಈ ಅಂಗಸಂಸ್ಥೆಯೇ ಕಾರವಾಗಿದೆ. ಕಚ್ಚಾ ತೈಲದ ಬೆಲೆಯೇರಿಕೆ ಈ ಕಂಪನಿಯ ಲಾಭಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಅಲ್ಲದೆ, ಈ ಕಂಪನಿಯ ಆದಾಯದಲ್ಲಿ ಕೂಡ ಹೆಚ್ಚಳವಾಗಲಿದೆ. ಬಿಎಸ್ ಇಯಲ್ಲಿ ಒಎನ್ ಜಿಸಿ ಪ್ರತಿ ಷೇರಿನ ಬೆಲೆ ಶುಕ್ರವಾರ 275.15 ರೂ. ಇತ್ತು. ಷೇರಿನ ಬೆಲೆಯಲ್ಲಿ ಶೇ.0.31ರಷ್ಟು ಏರಿಕೆ ಕಂಡುಬಂದಿತ್ತು.
ಶಿಶು ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಪತ್ತೆ; ನೆಸ್ಲೆ ಇಂಡಿಯಾ ಷೇರು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ
2.ಇಂದ್ರಪ್ರಸ್ತ ಗ್ಯಾಸ್: ಇದು ಅಡುಗೆ ಅನಿಲ ವಿತರಣೆಯ ಪ್ರಮುಖ ವಿತರಕ ಸಂಸ್ಥೆ. ಕಚ್ಚಾ ತೈಲದ ಬೆಲೆಯೇರಿಕೆ ಪೆಟ್ರೋಲ್ ಹಾಗೂ ಡೀಸೆಲ್ ಬಲೆಯೇರಿಕೆಗೆ ಕಾರಣವಾಗಬಲ್ಲದು. ಇದು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಕಡೆಗೆ ಹೆಚ್ಚಿನ ಒಲವು ಮೂಡಲು ಕಾರಣವಾಗಬಲ್ಲದು. ಏಕೆಂದರೆ ಇದರ ಬೆಲೆ ತುಸು ಕಡಿಮೆ. ಸೋಮವಾರದ ಬಿಎಸ್ಇ ಕ್ಲೋಸಿಂಗ್ ವೇಳೆ ಇಂದ್ರಪ್ರಸ್ತ ಷೇರಿನ ಬೆಲೆ 437.45 ಇದ್ದು, ಶೇ.0.25ರಷ್ಟು ಏರಿಕೆ ಕಂಡುಬಂದಿದೆ.
3.ಆಯಿಲ್ ಇಂಡಿಯಾ: ತೈಲ ಪರಿಶೋಧನೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ಕಂಪನಿ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ನಿರ್ಣಾಯಕ ಪಾತ್ರ ವಹಿಸಿದೆ. ಕಂಪನಿಯ ಗಳಿಕೆ ಕಚ್ಚಾ ತೈಲದ ಬೆಲೆಯ ಜೊತೆಗೆ ಏರಿಕೆ ಕಾಣಲಿದೆ. ಇದು ಕಂಪನಿಯ ಮಾರ್ಜಿನ್ ಹೆಚ್ಚುವಲ್ಲಿ ನೇರ ಪರಿಣಾಮ ಬೀರಲಿದೆ. ಹೀಗಾಗಿ ಕಚ್ಚಾ ತೈಲ ಬೆಲೆಯೇರಿಕೆ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆ ಕಾಣಲು ಕಾರಣವಾಗಲಿದೆ.
4.ಪೆಟ್ರೋನೆಟ್ ಎಲ್ ಎನ್ ಜಿ: ಈ ಕಂಪನಿ ಎಲ್ ಪಿಜಿ, ಸಿಎನ್ ಜಿ ಹಾಗೂ ಪಿಎನ್ ಜಿ ಪೂರೈಕೆದಾರ ಸಂಸ್ಥೆಯಾಗಿದೆ. ಎಲ್ ಎನ್ ಜಿ ಬೆಲೆಗಳು ಕಚ್ಚಾ ತೈಲದ ಬೆಲೆಯಲ್ಲಿನ ಏರಿಕೆ ಅಥವಾ ಇಳಿಕೆ ಮೇಲೆ ನೇರವಾಗಿ ಅವಲಂಬಿತವಾಗಿವೆ. ಹೀಗಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದ್ರೆ ಎಲ್ ಎನ್ ಜಿ ಬೆಲೆ ಕೂಡ ಹೆಚ್ಚಳವಾಗುತ್ತದೆ. ಕಚ್ಚಾ ತೈಲದ ಬೆಲೆಯೇರಿಕೆ ಎಲ್ಎನ್ ಜಿ ಮಾರಾಟದಲ್ಲಿ ಹೆಚ್ಚಳವಾಗಲು ಕಾರಣವಾಗಬಲ್ಲದು.
Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್ ನಾಯಕ!
5.ಇಂಜಿನಿಯರ್ಸ್ ಇಂಡಿಯಾ: ಸಿವಿಲ್ ಇಂಜಿನಿಯರಿಂಗ್ ಕೈಗಾರಿಕೆಯಲ್ಲಿ ಇಂಜಿನಿಯರ್ಸ್ ಇಂಡಿಯಾ ಪ್ರಮುಖ ಪಾತ್ರ ವಹಿಸಿದೆ. ಈ ಕಂಪನಿ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಹಾಗೂ ಇಪಿಸಿ ಸೇವೆಗಳ ಮೇಲೆ ಕೇಂದ್ರೀಕೃತವಾಗಿದೆ. ಕಚ್ಚಾ ತೈಲದ ಸಾಗಣೆಗೆ ರಾಷ್ಟ್ರಗಳ ನಡುವೆ ದೀರ್ಘ ಅಂತರದ ಹಾಗೂ ಸಮುದ್ರ ಆಳದ ಪೈಪ್ ಲೈನ್ ಗಳನ್ನು ಪ್ಲ್ಯಾನ್ ಮಾಡುವ ಹಾಗೂ ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಹೀಗಾಗಿ ಕಚ್ಚಾ ತೈಲದ ಬೆಲೆಯೇರಿಕೆ ಈ ಕಂಪನಿಯ ಷೇರಿನ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಲಿದೆ.