ಇರಾನ್ ಪರಮಾಣು ಕೇಂದ್ರದ ಮೇಲಿನ ಅಮೆರಿಕ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡಾಲರ್ ಬಲಗೊಂಡು 5 ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ತೈಲ ಬೆಲೆಯಲ್ಲೂ ಏರಿಳಿತ ಕಂಡುಬಂದಿದೆ.
ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದ್ದರಿಂದ ಯುಎಸ್ ಡಾಲರ್ ಬಲಗೊಂಡಿದೆ. ಡಾಲರ್ ಬಲಗೊಳ್ಳುವುದರ ಜೊತೆಗೆ ಕಚ್ಚಾ ತೈಲ ಬೆಲೆಯ ಏರಿಳಿತದಿಂದಾಗಿ ಭಾರತೀಯ ರೂಪಾಯಿ ಕುಸಿತ ಕಂಡಿದೆ. ಸೋಮವಾರ ಡಾಲರ್ ಎದುರು 23 ಪೈಸೆ ಕುಸಿದ ರೂಪಾಯಿ 86.78ಕ್ಕೆ ತಲುಪಿ ಐದು ತಿಂಗಳ ಕನಿಷ್ಠ ಮಟ್ಟವನ್ನು ದಾಖಲಿಸಿದೆ. ತೈಲ ಮಾರುಕಟ್ಟೆಯಲ್ಲೂ ಏರಿಳಿತಗಳು ಕಂಡುಬಂದಿವೆ. ಕಚ್ಚಾ ತೈಲ ಬೆಲೆ 5 ತಿಂಗಳ ಗರಿಷ್ಠ ಮಟ್ಟ ತಲುಪಿದೆ.
ಇನ್ನು ಯೆನ್ ಎದುರು ಡಾಲರ್ ಶೇ.1ರಷ್ಟು ಏರಿಕೆ ಕಂಡು 147.450ಕ್ಕೆ ತಲುಪಿದೆ. ಮೇ 15ರ ನಂತರ ಇದೇ ಮೊದಲ ಬಾರಿಗೆ ಡಾಲರ್ ಈ ಉನ್ನತ ಮಟ್ಟ ತಲುಪಿದೆ. ಜಪಾನ್ ಆಮದು ಮಾಡಿಕೊಳ್ಳುವ ತೈಲದಲ್ಲಿ ಶೇ.90ರಷ್ಟು ಪಶ್ಚಿಮ ಏಷ್ಯಾದಿಂದ ಬರುವುದರಿಂದ ತೈಲ ಬೆಲೆ ಏರಿಕೆಯಾದರೆ ಡಾಲರ್/ಯೆನ್ ವಿನಿಮಯ ದರ ಮತ್ತಷ್ಟು ಏರಿಕೆಯಾಗಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತರ 6 ಪ್ರಮುಖ ಕರೆನ್ಸಿಗಳ ಜೊತೆಗೆ ಹೋಲಿಸಿದರೆ ಯುಎಸ್ ಕರೆನ್ಸಿಯ ಮೌಲ್ಯವನ್ನು ತೋರಿಸುವ ಡಾಲರ್ ಸೂಚ್ಯಂಕ ಶೇ.0.15ರಷ್ಟು ಏರಿಕೆ ಕಂಡು 99.065ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಹೆಚ್ಚಳದಿಂದಾಗಿ ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಮಾರುಕಟ್ಟೆಗಳು ಕಾದು ನೋಡುತ್ತಿವೆ ಎಂದು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾದ ತಜ್ಞರು ಹೇಳಿದ್ದಾರೆ. ಈ ಸಂಘರ್ಷ ಆರ್ಥಿಕವಾಗಿ ಹಾನಿಕಾರಕವಾಗುವುದಕ್ಕಿಂತ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗುತ್ತದೆಯೇ ಎಂಬುದು ಪ್ರಮುಖ ಆತಂಕ ಎಂದು ಅವರು ಹೇಳಿದ್ದಾರೆ. ಇರಾನ್, ಇಸ್ರೇಲ್ ಮತ್ತು ಯುಎಸ್ ಸರ್ಕಾರಗಳ ಹೇಳಿಕೆಗಳು ಮತ್ತು ಕ್ರಮಗಳು ಕರೆನ್ಸಿ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುತ್ತವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಇನ್ನು ಇರಾನ್-ಅಮೇರಿಕಾ ಸಂಘರ್ಷ ತೀವ್ರಗೊಂಡರೆ ಸುರಕ್ಷಿತ ಕರೆನ್ಸಿಗಳ ಮೌಲ್ಯ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇರಾನ್‌ನ ಫೋರ್ಡೋ ಪರಮಾಣು ಕೇಂದ್ರದ ಮೇಲಿರುವ ಪರ್ವತದ ಮೇಲೆ ಅಮೆರಿಕ 30,000 ಪೌಂಡ್ ತೂಕದ ಬಾಂಬ್‌ಗಳನ್ನು ಹಾಕಿದ ನಂತರ ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಜಾಗತಿಕ ತೈಲ ರಫ್ತಿನಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಇರಾನ್, ಓಮನ್ ಮತ್ತು ಯುಎಇ ಹಂಚಿಕೊಳ್ಳುವ ಈ ಕಿರಿದಾದ ಜಲಸಂಧಿಯ ಮೂಲಕ ಹಾದುಹೋಗುತ್ತದೆ.

