ಮುಂದಿನ ತಿಂಗಳು ಚಾಬಹರ್ ಬಂದರು ಭಾರತಕ್ಕೆ ಹಸ್ತಾಂತರ! ಶೀಘ್ರದಲ್ಲೇ ಇರಾನ್ ಚಾಬಹರ್ ಬಂದರು ಭಾರತದ ನಿಯಂತ್ರಣಕ್ಕೆ! ಬಂದರು ಹಸ್ತಾಂತರ ಕುರಿತು ಇರಾನ್ ಸಚಿವ ಅಬ್ಬಾಸ್ ಅಖೌಂಡಿ ಘೋಷಣೆ! ಭಾರತದ ಯಶಸ್ವಿ ವಿದೇಶಾಂಗ ನೀತಿ ಕಂಡು ಪಾಕ್, ಚೀನಾ ಗಡಗಡ
ನವದೆಹಲಿ(ಸೆ.7): ಭಾರತ ಮತ್ತು ಇರಾನ್ ಮಾಡಿಕೊಂಡಿದ್ದ ಚಾಬಹರ್ ಒಪ್ಪಂದದ ಅನ್ವಯ, ಇನ್ನೊಂದು ತಿಂಗಳಲ್ಲಿ ಚಾಬಹರ್ ಬಂದರು ನಿಯಂತ್ರಣ ಭಾರತದ ಪಾಲಾಗಲಿದೆ. ಈ ಬಗ್ಗೆ ಭಾರತಕ್ಕೆ ಆಗಮಿಸಿರುವ ಇರಾನ್ ಸಚಿವ ಅಬ್ಬಾಸ್ ಅಖೌಂಡಿ ಘೋಷಣೆ ಮಾಡಿದ್ದಾರೆ.
ನೀತಿ ಆಯೋಗದ ಆಹ್ವಾನದ ಮೇರೆಗೆ ಮೊಬಿಲಿಟಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಖೌಂಡಿ ಭಾರತಕ್ಕೆ ಆಗಮಿಸಿದ್ದು, ಈ ವೇಳೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಚಾಬಹರ್ ಬಂದರು ನಿಯಂತ್ರಣವನ್ನು ಭಾರತಕ್ಕೆ ನೀಡಲು ನಾವು ಸಿದ್ಧರಿದ್ದೇವೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಒಪ್ಪಂದದ ಅನ್ವಯ ನಾವು ಕೂಡ ಭಾರತದ ಒಂದು ಬಂದರನ್ನು ಕಳೆದ ಒಂದೂವರೆ ವರ್ಷದಿಂದ ಬಳಕೆ ಮಾಡಿಕೊಳ್ಳುತ್ತಿದ್ದೆವೆ ಎಂದು ಅಖೌಂಡಿ ತಿಳಿಸಿದರು.
ಭಾರತದ ಪಶ್ಚಿಮ ಕರಾವಳಿಯಿಂದ ಚಾಬಹರ್ ಬಂದರು ನಿಯಂತ್ರಣ ಸುಲಭ ಸಾಧ್ಯ. ಅಲ್ಲದೆ ಈ ಬಂದರಿನ ಮೇಲೆ ನಿಯಂತ್ರಣ ಸಾಧಿಸಿದರೆ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಭಾರತ ದೊಡ್ಡ ಮಟ್ಟದಲ್ಲಿ ತಿರುಗೇಟು ನೀಡಿದಂತಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಕೂಡ ಹೆಚ್ಚಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಬಂದರು ಮಾತ್ರವಲ್ಲದೇ ಭಾರತ ಇರಾನ್ ನ ಬ್ಯಾಂಕಿಂಗ್ ವಲಯದಲ್ಲೂ ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದು, ಇದಕ್ಕೆ ಇರಾನ್ ನ ಸೆಂಟ್ರಲ್ ಬ್ಯಾಂಕ್ ಕೂಡ ಅನುಮೋದನೆ ನೀಡಿದೆ.
