ಟೆಹರನ್(ಡಿ.04): ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ತೈಲ ರಫ್ತು ಮಾಡುವ ಇರಾನ್ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯುವಿಲ್ಲ ಎಂದು ಹೇಳಿರುವ ರೋಹಾನಿ, ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದಾರೆ.

ಗಲ್ಫ್ ಸಮುದ್ರದಲ್ಲಿ ಇರಾನ್ ಕಚ್ಚಾ ತೈಲ ಹಡಗನ್ನು ತಡೆದರೆ ಆ ಮಾರ್ಗವಾಗಿ ಯಾವುದೇ ರಾಷ್ಟ್ರದ ಹಡಗು ಸಂಚರಿಸದಂತೆ ಇರಾನ್ ತಡೆಯಲಿದೆ ಎಂದು ರೋಹಾನಿ ಹೇಳಿದ್ದಾರೆ.

ಆರ್ಥಿಕ ದಿಗ್ಬಂಧನದ ಮೂಲಕ ಇರಾನ್‌ನ್ನು ಮಣಿಸಲು ಸಾಧ್ಯ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮೂರ್ಖತನ ಎಂದಿರುವ ರೋಹಾನಿ, ಒಂದು ವೇಳೆ ನಮ್ಮ ತೈಲ ಹಡಗುಗಳನ್ನು ತಡೆದರೆ ನಾವೂ ಇತರರ ತೈಲದ ಹಡಗುಗಳನ್ನು ತಡೆಯವುದಾಗಿ ನೇರ ಬೆದರಿಕೆಯೊಡ್ಡಿದ್ದಾರೆ.

ಇರಾನ್‌ನ ಅಣು ಯೋಜನೆಗಳನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕ ಕಳೆದ ತಿಂಗಳಷ್ಟೇ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ಅಲ್ಲದೇ ಜಗತ್ತಿನ ಯಾವುದೇ ರಾಷ್ಟ್ರ ಇರಾನ್‌ ಜೊತೆ ತೈಲ ವ್ಯಾಪಾರ ಮಾಡದಂತೆ ತಡೆ ನೀಡಿತ್ತು. ನಂತರ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಇದರಿಂದ ವಿನಾಯ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.