ವಾಷಿಂಗ್ಟನ್(ಜ.27)‌: ಕೊರೋನಾ ಹೊಡೆತಕ್ಕೆ ವಿಶ್ವದ ಬಹುತೇಕ ಆರ್ಥಿಕತೆಗಳು ಇನ್ನೂ ನಲುಗುತ್ತಿರುವಾಗಲೇ, 2021ನೇ ಹಣಕಾಸು ವರ್ಷದಲ್ಲಿ ಭಾರತ ಶೇ.11.5ರಷ್ಟುಆರ್ಥಿಕ ಪ್ರಗತಿ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಶುಭ ಸುದ್ದಿ ನೀಡಿದೆ.

ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪೈಕಿ ಎರಡಂಕಿ ಪ್ರಗತಿ ದರ ದಾಖಲಿಸಲಿರುವ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಇದರೊಂದಿಗೆ ವಿಶ್ವದಲ್ಲೇ ಅತಿವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶ ಎಂಬ ಹಿರಿಮೆಯನ್ನು ಭಾರತ ತನ್ನಲ್ಲೇ ಉಳಿಸಿಕೊಳ್ಳಲಿದೆ.

ದೇಶದ ಆರ್ಥಿಕತೆ ಮತ್ತೆ ಹಾದಿಗೆ ಮರಳುತ್ತಿದೆ, 2020-21ರ ಕೊನೆಯ ತ್ರೈಮಾಸಿಕ ವೇಳೆಗೆ ಆರ್ಥಿಕತೆ ಧನಾತ್ಮಕ ಬೆಳವಣಿಗೆ ಕಾಣಲಿದೆ ಎಂಬ ಸರ್ಕಾರದ ಸತತ ವಿಶ್ವಾಸದ ನುಡಿಗಳ ಬೆನ್ನಲ್ಲೇ ಐಎಂಎಫ್‌ ಪ್ರಕಟಿಸಿರುವ ಈ ವರದಿ, ಕೊರೋನಾದಿಂದಾಗಿ ಕಳೆದ ಒಂದು ವರ್ಷದಿಂದ ದೇಶದ ಜನರಿಗೆ ಶುಭ ಸುದ್ದಿಯಾಗಿ ಹೊರಹೊಮ್ಮಿದೆ. 2020ರಲ್ಲಿ ಭಾರತದ ಆರ್ಥಿಕತೆ ಶೇ.-8ರಷ್ಟುಕುಸಿದಿತ್ತು.

ಉಳಿದಂತೆ 2021ರಲ್ಲಿ ಚೀನಾ ಶೇ.8.1., ಸ್ಪೇನ್‌ ಶೇ.5.9 ಮತ್ತು ಫ್ರಾನ್ಸ್‌ ಶೇ.5.5ರಷ್ಟುಪ್ರಗತಿ ದರ ದಾಖಲಿಸಲಿದೆ ಎಂದು ವರದಿ ಹೇಳಿದೆ.