ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಅನಿವಾಸಿ ಭಾರತೀಯರು ದೂರು ನೀಡಿರುವ ಕಾರಣ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಕಾರ್ಯನಿರ್ವಹಿಸದ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಂಡಿಲ್ಲ ಎಂದು ತಿಳಿಸಿದೆ.
ನವದೆಹಲಿ (ಜು.19): ಅನೇಕ ಅನಿವಾಸಿ ಭಾರತೀಯರ (ಎನ್ ಆರ್ ಐ) ಹೂಡಿಕೆಗಳನ್ನು ತಡೆ ಹಿಡಿಯಲಾಗಿದೆ. ಹಾಗೆಯೇ ಕೆಲವರಿಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ.ಇವೆಲ್ಲದಕ್ಕೂ ಕಾರಣವಾಗಿರೋದು ಅವರ ಪ್ಯಾನ್ ಕಾರ್ಡ್ ಗಳು ಕಾರ್ಯನಿರ್ವಹಿಸದಿರೋದು.ಅನಿವಾಸಿ ಭಾರತೀಯರು (ಎನ್ ಆರ್ ಐಗಳು) ಹಾಗೂ ಭಾರತದ ಸಾಗರೋತ್ತರ ಪೌರತ್ವ ಹೊಂದಿರೋರು (ಒಸಿಐ) ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡುವ ಅಗತ್ಯವಿಲ್ಲ. ಹೀಗಿದ್ದರೂ ಕೂಡ ಅನೇಕರ ಪ್ಯಾನ್ ಕಾರ್ಡ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿಅನಿವಾಸಿ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಂಗಳವಾರ ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆ, ಜಾರಿಯಲ್ಲಿರದ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ಯಾನ್ ಸಕ್ರಿಯ ಇಲ್ಲದಿದ್ದರೂ ಐಟಿಆರ್ ಸಲ್ಲಿಕೆ ಮಾಡಬಹುದು ಎಂದು ಅನಿವಾಸಿ ಭಾರತೀಯರಿಗೆ ತಿಳಿಸಿದೆ. ಹಾಗೆಯೇ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸದೆ ಇರಲು ಕಾರಣಗಳೇನು ಎಂಬುದನ್ನು ಕೂಡ ಆದಾಯ ತೆರಿಗೆ ಇಲಾಖೆ ವಿವರಿಸಿದೆ.
ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 2023ರ ಜೂನ್ 30 ಅಂತಿಮ ಗಡುವಾಗಿತ್ತು. ಒಂದು ವೇಳೆ ಈ ದಿನಾಂಕದೊಳಗೆ ನೀವು ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡದಿದ್ದರೆ ಜುಲೈ 1ರಿಂದ ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ. ಇದರಿಂದ ನಿಮಗೆ ಐಟಿಆರ್ ಸಲ್ಲಿಕೆ ಸೇರಿದಂತೆ ಕೆಲವು ಹಣಕಾಸಿನ ವಹಿವಾಟುಗಳನ್ನು ನಡೆಸಲು ಸಾಧ್ಯವಾಗೋದಿಲ್ಲ. ಆದರೆ, ಇದು ಅನಿವಾಸಿ ಭಾರತೀಯರು (ಎನ್ ಆರ್ ಐ) ಹಾಗೂ ಭಾರತದ ಸಾಗರೋತ್ತರ ಪೌರತ್ವ ಹೊಂದಿರೋರಿಗೆ (ಒಸಿಐ) ಅನ್ವಯಿಸೋದಿಲ್ಲ. ಆದರೂ ಕೆಲವು ಎನ್ ಆರ್ ಐಗಳು ಹಾಗೂ ಒಸಿಐಗಳು ತಮ್ಮ ಪ್ಯಾನ್ ಕಾರ್ಯನಿರ್ವಹಿಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಇನ್ನು ಆಧಾರ್ ಜೊತೆಗೆ ಲಿಂಕ್ ಮಾಡದ ಹಿನ್ನೆಲೆಯಲ್ಲಿ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಬಳಕೆದಾರರು ಕೂಡ ಇದರಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಟ್ವೀಟ್ ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಲ್ಲದೆ, ಈ ಬಗ್ಗೆ ಈ ಕೆಳಗಿನಂತೆ ಸ್ಪಷ್ಟನೆ ನೀಡಿದೆ.
ಐಟಿಆರ್ ಸಲ್ಲಿಕೆ ಅಂತಿಮ ಗಡುವು ವಿಸ್ತರಣೆ ಕಷ್ಟ; ಜು.31ರೊಳಗೆ ತಪ್ಪದೇ ರಿಟರ್ನ್ ಫೈಲ್ ಮಾಡಿ
1.ಕಳೆದ ಮೂರು ಮೌಲ್ಯಮಾಪನ ವರ್ಷದಲ್ಲಿ ಐಟಿಆರ್ ಸಲ್ಲಿಕೆ ಮಾಡಿರೋರು ಅಥವಾ ವ್ಯಾಪ್ತಿ ನಿರ್ಧರಣಾ ಅಧಿಕಾರಿಗೆ (JAO) ತಮ್ಮ ನಿವಾಸದ ಮಾಹಿತಿ ನೀಡಿದ್ದರೆ ಅಂಥ ಎನ್ ಆರ್ ಐಗಳ ವಾಸದ ಸ್ಟೇಟಸ್ ಅನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿರುತ್ತದೆ. ಒಂದು ವೇಳೆ ಈ ಮೇಲಿನ ಎರಡು ಕೆಲಸಗಳಲ್ಲಿ ಯಾವುದೇ ಒಂದನ್ನು ಕೂಡ ಮಾಡದಿದ್ದರೆ ಮಾತ್ರ ಪ್ಯಾನ್ ಸಕ್ರಿಯವಾಗಿರೋದಿಲ್ಲ. ಇನ್ನು ಕಾರ್ಯನಿರ್ವಹಿಸದ ಪ್ಯಾನ್ ಹೊಂದಿರುವ ಎನ್ ಆರ್ ಐಗಳು ತಮ್ಮ ವಾಸ ಸ್ಥಳದ ಬಗ್ಗೆ ಸಂಬಂಧಪಟ್ಟ ಜೆಎಒಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಬೇಕು ಹಾಗೂ ಪ್ಯಾನ್ ದಾಖಲೆಗಳಲ್ಲಿ ವಾಸ ಸ್ಥಳದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡುವಂತೆ ಮನವಿ ಮಾಡಬೇಕು. ಜೆಎಒ ಮಾಹಿತಿಗಳನ್ನು https://eportal.incometax.gov.in/iec/foservices/#/pre-login/knowYourAO2 ಇಲ್ಲಿ ಪರಿಶೀಲಿಸಬಹುದು.
Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಈ ವಿಷ್ಯ ಗಮನದಲ್ಲಿರಲಿ!
2. ವಾಸಸ್ಥಳದ ಸ್ಟೇಟಸ್ ಅಡಿಯಲ್ಲಿ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ ಹಾಗೂ ಜೆಎಒಗೆ ವಾಸಸ್ಥಳದ ಸ್ಟೇಟಸ್ ಮಾಹಿತಿ ಅಪ್ಡೇಟ್ ಮಾಡದ ಒಸಿಐ ಅಥವಾ ವಿದೇಶಿ ನಾಗರಿಕರು ಅಥವಾ ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿ ಐಟಿಆರ್ ಫೈಲ್ ಮಾಡದವರ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಂಡಿರುತ್ತವೆ. ಹೀಗಾಗಿ ವಿದೇಶಿ ನಾಗರಿಕರು/ಒಸಿಐಗಳು ಅಗತ್ಯ ದಾಖಲೆಗಳೊಂದಿಗೆ ಜೆಎಒಗೆ ವಾಸಸ್ಥಳದ ಸ್ಟೇಟಸ್ ಬಗ್ಗೆ ಮಾಹಿತಿ ನೀಡಬೇಕು.
3.ಇನ್ನು ಕಾರ್ಯನಿರ್ವಹಿಸದ ಪ್ಯಾನ್ ನಿಷ್ಕ್ರಿಯ ಪ್ಯಾನ್ ಅಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಅಲ್ಲದೆ, ಕಾರ್ಯನಿರ್ವಹಿಸದ ಪ್ಯಾನ್ ಹೊಂದಿರೋರು ಐಟಿಆರ್ ಸಲ್ಲಿಕೆ ಮಾಡಬಹುದು ಎಂದು ತಿಳಿಸಿದೆ.
