ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಕಲಬುರಗಿ ಕ್ಲಸ್ಟರ್‍‌ಗಳಿಗೆ ಆದ್ಯತೆ ಕೊಡಲಾಗುತ್ತಿದೆ ಎಂದ ಐಟಿ-ಬಿಟಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ 

ಬೆಂಗಳೂರು(ನ.18): ರಾಜ್ಯದ ಆರ್ಥಿಕತೆಗೆ ಬೆಳವಣಿಗೆಯ ವೇಗವನ್ನು ಒದಗಿಸಬೇಕೆಂದರೆ ಉದ್ಯಮಗಳು ಬೆಂಗಳೂರಿನಿಂದ ಆಚೆ ನೆಲೆಯೂರುವುದು ಅಗತ್ಯವಾಗಿದೆ. ಹೀಗಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಕಲಬುರಗಿ ಕ್ಲಸ್ಟರ್‍‌ಗಳಿಗೆ ಆದ್ಯತೆ ಕೊಡಲಾಗುತ್ತಿದೆ ಅಂತ ಐಟಿ-ಬಿಟಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಕೊನೆಯ ದಿನವಾದ ಇಂದು(ಶುಕ್ರವಾರ) 'ಬಿಯಾಂಡ್‌ ಬೆಂಗಳೂರು, ಬಿಯಾಂಡ್‌ ಎಕ್ಸ್‌ಪೆಕ್ಟೇಶನ್ಸ್‌' ವರದಿಯನ್ನು ಬಿಡುಗಡೆ ಮಾಡಿದ ಬಳಿಕ 'ಬಿಯಾಂಡ್ ಬೆಂಗಳೂರು' ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಉದ್ದಿಮೆಗಳು ಅತಿಯಾಗಿ ನೆಲೆಗೊಂಡಿವೆ. ಈ ದಟ್ಟಣೆಯನ್ನು ಕಡಿಮೆ ಮಾಡುವುದು ಬಿಯಾಂಡ್‌ ಬೆಂಗಳೂರು ಉಪಕ್ರಮದ ಗುರಿಯಾಗಿದೆ. ಕೋವಿಡ್‌ ಪಿಡುಗಿನ ನಂತರ ಸೃಷ್ಟಿಯಾದ ಪರಿಸ್ಥಿತಿಯು ಇದರ ಯಶಸ್ಸಿಗೆ ಪೂರಕವಾಗಿ ಒದಗಿ ಬಂತು. ಉದ್ದಿಮೆಗಳಿಗೆ ಬೇಕಾದ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಒದಗಿಸಲು ಸರಕಾರವು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸ್ಥಾಪನೆಯತ್ತ ಗಂಭೀರವಾಗಿ ಚಿಂತಿಸುತ್ತಿದೆ ಎಂದು ವಿವರಿಸಿದರು.

ಉದ್ಯಮರಂಗದಲ್ಲಿ ಮಹಿಳೆಯರಿಗೆ ಉತ್ತೇಜನ ಅಗತ್ಯ: ಡಾ.ಶ್ರೀಧರ್ ಮಿಟ್ಟ

ಬಿಯಾಂಡ್‌ ಬೆಂಗಳೂರು ಉಪಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಬೇಕೆಂದರೆ, ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಂವಾದ ನಡೆಯುತ್ತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.