* ಕ್ಯಾಂಪ್ಕೋದ ನೂತನ ಉತ್ಪನ್ನ ಇಂದಿನಿಂದ ಲಭ್ಯ* 80 ಪೀಸ್‌ಗಳಿರುವ 1 ಜಾರ್‌ಗೆ 160 ದರ ನಿಗದಿ* ಡಾರ್ಕ್ ಮತ್ತು ಮಿಲ್ಕ್‌ನಲ್ಲಿ ನ್ಯೂಟ್ರಿಷನ್‌ ಚಾಕಲೇಟ್‌ ಹೊರತರಲು ಸಿದ್ಧತೆ

ಆತ್ಮಭೂಷಣ್‌

ಮಂಗಳೂರು(ಜು.12): ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇದೀಗ ಜಾಕ್‌ಫ್ರೂಟ್‌ ಎಕ್ಲೇರ್‌ ಹೆಸರಿನಲ್ಲಿ ಚಾಕಲೇಟ್‌ ತಯಾರಿಸಿದ್ದು ಸೋಮವಾರ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಹಲಸಿನ ಹಣ್ಣಿನಿಂದ ಚಾಕಲೇಟ್‌ ಉತ್ಪನ್ನ ಮಾರುಕಟ್ಟೆಗೆ ಹೊರಬರುತ್ತಿರುವುದು ಭಾರತದಲ್ಲಿ ಇದೇ ಮೊದಲು ಎಂದು ಕ್ಯಾಂಪ್ಕೋ ಹೇಳಿಕೊಂಡಿದೆ.

ನಮ್ಮಲ್ಲಿ ನೈಸರ್ಗಿಕವಾಗಿ ದೊರಕುವ ಹಲಸಿನ ಹಣ್ಣು (ಜಾಕ್‌ಫ್ರೂಟ್‌) ಈಗ ಜಾಗತಿಕ ಮಾರುಕಟ್ಟೆ ಪಡೆದುಕೊಂಡಿದೆ. ಚಿಫ್ಸ್‌, ಸಿಹಿ ತಿನಿಸು ಸೇರಿದಂತೆ ಬಗೆಬಗೆಯ ಖಾದ್ಯಗಳಿಗೆ ಹೆಸರಾದ ಹಲಸಿನ ಹಣ್ಣಿನಿಂದ ಈಗ ಚಾಕಲೇಟ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಈ ಜಾಕ್‌ಫ್ರೂಟ್‌ ಚಾಕಲೇಟ್‌ ಕ್ಯಾಂಪ್ಕೋ ಸ್ಥಾಪಕರ ದಿನಾಚರಣೆ ದಿನವಾದ ಜು.12ರಂದು ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹಲಸಿನ ಚಾಕಲೇಟ್‌ ಹೆಗ್ಗಳಿಕೆ:

ಹಲಸಿನ ಹಣ್ಣಿನಿಂದ ತರಹೇವಾರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆದರೆ ಇಲ್ಲಿವರೆಗೆ ಚಾಕಲೇಟ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ. ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನವಾಗಿ ಈ ಚಾಕಲೇಟ್‌ ಸಿದ್ಧಪಡಿಸಲಾಗಿದೆ. ಕಳೆದ 8-9 ತಿಂಗಳಿಂದ ಜಾಕ್‌ಫ್ರೂಟ್‌ ಚಾಕಲೇಟ್‌ನ ಪ್ರಾಯೋಗಿಕ ತಯಾರಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿಯಲ್ಲಿ ನಡೆದಿದೆ. ಇದು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈಗ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ.

ಮಳೆ ಬಂದಿದೆ, ಎಲ್ಲೆಡೆ ಹಲಸಿನ ಹಣ್ಣು ಲಭ್ಯ, ಸಿಕ್ಕಿದರೆ ಬಿಡಬೇಡಿ...

ಒಂದು ಟನ್‌ ಚಾಕಲೇಟ್‌ ಉತ್ಪಾದನೆಗೆ 100 ಕೆ.ಜಿ. ಹಲಸಿನಹಣ್ಣಿನ ಚಿಫ್ಸ್‌ ಬೇಕಾಗುತ್ತದೆ. ಅಂದರೆ ಸುಮಾರು 500 ಕೆ.ಜಿ. ಹಲಸಿನ ಹಣ್ಣು ಬಳಕೆ ಮಾಡಲಾಗಿದೆ. ಇದಕ್ಕೆ ಕೇರಳ ಹಾಗೂ ಕರ್ನಾಟಕದ ಸ್ವಾದಿಷ್ಟಹಲಸಿನ ಹಣ್ಣುಗಳನ್ನು ಬಳಕೆ ಮಾಡಲಾಗಿದೆ.

ಮಾರುಕಟ್ಟೆಗೆ ಜಾರ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಒಂದು ಜಾರ್‌ನಲ್ಲಿ 80 ಚಾಕಲೇಟ್‌ ಪೀಸ್‌ ಇದೆ. 1 ಪೀಸ್‌(5 ಗ್ರಾಂ)ಗೆ 2 ರು. ದರ. 1 ಜಾರ್‌ಗೆ 160 ರು. ದರ ನಿಗದಿಪಡಿಸಲಾಗಿದೆ. ಈ ಚಾಕಲೇಟ್‌ನಲ್ಲಿ ಶೇ.12ರಷ್ಟು ಹಲಸಿನ ಹಣ್ಣಿನ ಅಂಶ, ಸಕ್ಕರೆ, ಹಾಲು ಹಾಗೂ ಫ್ಯಾಟ್‌ನ್ನು ಬಳಸಿ ಸಿದ್ಧಪಡಿಸಲಾಗಿದೆ. ಗರಿಷ್ಠ 9 ತಿಂಗಳ ವರೆಗೆ ಈ ಚಾಕಲೇಟ್‌ ಉಪಯೋಗಿಸಬಹುದು ಎನ್ನುತ್ತಾರೆ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್‌.

ಬರಲಿದೆ ಬೆಲ್ಲದ ವಿನ್ನರ್‌, ದ್ರಾಕ್ಷಿಯ ಚಾಕಲೇಟ್‌

ಚಾಕಲೇಟ್‌ನಲ್ಲಿ ಇನ್ನೂ ಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನ ಹೊರತರಲು ಉದ್ದೇಶಿಸಿರುವ ಕ್ಯಾಂಪ್ಕೋ, ಪ್ರಸ್ತುತ ಕಾಲದಲ್ಲಿ ನ್ಯೂಟ್ರಿಷನ್‌ ಹೊಂದಿರುವ, ರೋಗಪ್ರತಿರೋಧ ಶಕ್ತಿ ಹೊಂದಿರುವ ಉತ್ಪನ್ನಗಳನ್ನು ಪರಿಚಯಲು ಮುಂದಾಗಿದೆ. ಬೆಲ್ಲವನ್ನು ಬಳಸಿ ಮಾಡಿದ ವಿನ್ನರ್‌ ಪೇಯ, ಡಾರ್ಕ್ ಮತ್ತು ಮಿಲ್ಕ್‌ನಲ್ಲಿ ನ್ಯೂಟ್ರಿಷನ್‌ ಚಾಕಲೇಟ್‌ ಹೊರತರಲು ಸಿದ್ಧತೆ ನಡೆಸಿದೆ. ಅಲ್ಲದೆ ಕಪ್ಪು ದ್ರಾಕ್ಷಿಯಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲು ಚಿಂತನೆ ನಡೆಸುತ್ತಿದೆ.

ಜಾಕ್‌ಫ್ರೂಟ್‌ ಎಕ್ಲೇರ್‌ ಇದು ಕ್ಯಾಂಪ್ಕೋದ ಪ್ರಯೋಗ. ಈ ಚಾಕಲೇಟ್‌ ಸೋಮವಾರ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲಿದೆ. ಬಳಿಕ ಕೇರಳ ಮಾರುಕಟ್ಟೆ ಹೊಂದಲಿದ್ದು, ನಂತರ ಇಡೀ ದೇಶಕ್ಕೆ ಈ ಚಾಕಲೇಟ್‌ ಪೂರೈಸುವ ಉದ್ದೇಶ ಇದೆ. ಮುಂದಿನ ದಿನಗಳಲ್ಲಿ ಕ್ಯಾಂಪ್ಕೋದಿಂದ ಇನ್ನಷ್ಟು ಮೌಲ್ಯವರ್ಧಿತ ಚಾಕಲೇಟ್‌ ಉತ್ಪನ್ನ ಹೊರಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದ್ದಾರೆ.