Asianet Suvarna News Asianet Suvarna News

ಫಾರ್ಚೂನ್ ಬ್ಯುಸಿನೆಸ್ ರಿವ್ಯೂ ಮುಖಪುಟದಲ್ಲಿ ಮಿಂಚಿದ ಕನ್ನಡತಿ; ಯಾರೀಕೆ ಶಾಂತಲಾ ಸದಾನಂದ ?

ಪ್ರತಿಷ್ಟಿತ ಬ್ಯುಸಿನೆಸ್ ನಿಯತಕಾಲಿಕ ಫಾರ್ಚೂನ್ ಬ್ಯುಸಿನೆಸ್  ರಿವ್ಯೂ ಏಪ್ರಿಲ್ ಸಂಚಿಕೆಯಲ್ಲಿ 2023ನೇ ಸಾಲಿನ  ಅತ್ಯಂತ ಪ್ರಶಂಸಾರ್ಹ 10 ಮಹಿಳಾ ನಾಯಕಿಯರನ್ನು ಪರಿಚಯಿಸಲಾಗಿದೆ. ಇದರಲ್ಲಿ ಕರ್ನಾಟಕ ಮೂಲದ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಇನ್ನೋವ ಸಲ್ಯೂಷನ್ಸ್ ಅಧ್ಯಕ್ಷೆ  ಶಾಂತಲಾ ಸದಾನಂದ ಅವರ ಹೆಸರು ಕೂಡ ಇದ್ದು, ಇವರ ಫೋಟೋವನ್ನು ಈ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಲಾಗಿದೆ. 

Indian origin  Shantala Sadananda on the Fortune business reviews cover page Top 10 Most Admired Business Women anu
Author
First Published May 1, 2023, 5:45 PM IST

ನವದೆಹಲಿ (ಮೇ 1): ಪ್ರತಿಷ್ಟಿತ ಬ್ಯುಸಿನೆಸ್ ನಿಯತಕಾಲಿಕ ಫಾರ್ಚೂನ್ ಬ್ಯುಸಿನೆಸ್  ರಿವ್ಯೂ  ಏಪ್ರಿಲ್ ಸಂಚಿಕೆಯಲ್ಲಿ ಉದ್ಯಮ ರಂಗದಲ್ಲಿ 2023ನೇ ಸಾಲಿನ  ಅತ್ಯಂತ ಪ್ರಶಂಸಾರ್ಹ 10 ಮಹಿಳಾ ನಾಯಕಿಯರನ್ನು ಪರಿಚಯಿಸಲಾಗಿದೆ. ವಿಶೇಷವೆಂದ್ರೆ ಈ ಸಂಚಿಕೆಯ ಮುಖಪುಟದಲ್ಲಿ ಭಾರತೀಯ ಮೂಲದ ಅದರಲ್ಲೂ ಕರ್ನಾಟಕದ ಮಲೆನಾಡಿನ ಸಾಗರದ ಹೆಣ್ಣು ಮಗಳು ಹುಡುಗಿ ಶಾಂತಲಾ ಸದಾನಂದ್ ಅವರ ಫೋಟೋ ಪ್ರಕಟಿಸಲಾಗಿದೆ.ಹಾಗೆಯೇ ಉದ್ಯಮ ರಂಗದ ಟಾಪ್ 10  ಮಹಿಳಾ ಉದ್ಯಮಿಗಳಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಶಾಂತಲಾ ಸದಾನಂದ ಇನ್ನೋವ ಸಲ್ಯೂಷನ್ಸ್ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಂಸಗಾರು ಮೂಲದವರಾದ ಶಾಂತಲಾ, ಮುಂಬಯಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಚಿನ್ಮಯ ಮಿಷನ್ ಜೊತೆಗೆ ಇವರು ನಿಕಟ ಸಂಪರ್ಕ ಹೊಂದಿದ್ದಾರೆ. ಜಾಗತಿಕ ಉದ್ಯಮ ನಿರ್ವಹಣೆಯಲ್ಲಿ 27 ವರ್ಷಗಳ ಅನುಭವ ಹೊಂದಿರುವ ಶಾಂತಲಾ,ಇನ್ನೋವ ಸಲ್ಯೂಷನ್ಸ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವ ಜೊತೆಗೆ ಅನೇಕ ಮಾರ್ಪಾಡುಗಳನ್ನು ಕೂಡ ಮಾಡಿದ್ದಾರೆ. ಹೊಸ ಅನ್ವೇಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ತಂತ್ರಗಳ ಮೂಲಕ ಸಂಸ್ಥೆ ಹಾಗೂ ಕ್ಲೈಂಟ್ಸ್ ಇಬ್ಬರ ಏಳ್ಗೆಗೂ ಆದ್ಯತೆ ನೀಡಿದ್ದಾರೆ. 2022ನೇ ಸಾಲಿನಲ್ಲಿ ಕೂಡ ಇಲ್ಲಿನೋಯಿಸ್ 2022ರ ಟಾಪ್ 50 ಮಹಿಳಾ ನಾಯಕಿಯರಲ್ಲಿ ಕೂಡ ಶಾಂತಲಾ ಸದಾನಂದ ಅವರಿಗೆ ಸ್ಥಾನ ನೀಡಲಾಗಿತ್ತು.

ಈ ಬಗ್ಗೆ ಲಿಂಕ್ಡ್ ಇನ್ ಮೂಲಕ ಸಂತಸ ಹಂಚಿಕೊಂಡಿರುವ ಶಾಂತಲಾ ಸದಾನಂದ 'ಫಾರ್ಚೂನ್ ಬ್ಯುಸಿನೆಸ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡಿರೋದಕ್ಕೆ ಹಾಗೂ ಟಾಪ್ 10  ಅತ್ಯಂತ ಪ್ರಶಂಸಾರ್ಹ ಮಹಿಳಾ ಉದ್ಯಮಿಯಾಗಿ ಗುರುತಿಸಿರೋದಕ್ಕೆ ನಿಜವಾಗಿಯೂ ಖುಷಿಯಾಗುತ್ತದೆ. ನಾನು ಇದಕ್ಕೆ ಕೃತಜ್ಞಳಾಗಿದ್ದೇನೆ. ಈ ಪಯಣ ಕೆಲವು ಅದ್ಭುತ ನಾಯಕರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ನನ್ನ ಕುಟುಂಬದ ಜೊತೆಗೆ ಅನುಭವಗಳು, ಕಲಿಕೆ, ಏರಿಳಿತಗಳಿಂದ ಕೂಡಿತ್ತು' ಎಂದು ಬರೆದುಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಇನ್ನು ಆರ್ಟಿಕಲ್‌ ಓದೋಕು ಕೊಡಬೇಕು ದುಡ್ಡು!

ಶಾಂತಲಾ ಸದಾನಂದ ಅವರು ಕಂಪ್ಯೂಟರ್ ಇಂಜಿನಿಯರಿಂಗ್ ಹಾಗೂ ಕಾಮರ್ಸ್ ಎರಡರಲ್ಲೂ ಬ್ಯಾಚುಲರ್ ಡಿಗ್ರಿಗಳನ್ನು ಹೊಂದಿದ್ದಾರೆ. ಹಾಗೆಯೇ ಆಪರೇಷನಲ್ ರಿಸರ್ಚ್ ಹಾಗೂ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಇಂಜಿನಿಯರಿಂಗ್ ಟ್ರೈನಿಯಾಗಿ ವೃತ್ತಿ ಆರಂಭಿಸಿದ ಶಾಂತಲಾ ಪೆಟ್ರೋಕೆಮಿಕಲ್ಸ್, ಪಾಲಿಮರ್ಸ್, ಪಾಲಿಸ್ಟರ್ಸ್ ಹಾಗೂ ಇತರ ಸಂಘಟಿತ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಸಾಕಷ್ಟು ನೆರವು ನೀಡುತ್ತದೆ. ಕ್ಯಾನ್ ಬೇನಲ್ಲಿ ಶಾಂತಲಾ ಅವರಿಗೆ ಮೂಲಭೂತ ನಾಯಕತ್ವದ ತರಬೇತಿ ಸಿಕ್ಕಿತು. ಇನ್ನು ಇಲ್ಲಿ ಅವರು ಕೋಡಿಂಗ್ ನ ಮೂಲತತ್ವಗಳನ್ನು ಕಲಿತರು. ಆ ಬಳಿಕ ಹಣಕಾಸಿನ ಪ್ಲ್ಯಾನ್, ಮಾರಾಟಗಳು ಹಾಗೂ ಮಾರ್ಕೆಟಿಂಗ್ ಪ್ಲ್ಯಾನ್ ಗಳ ಅಭಿವೃದ್ಧಿ, ಗ್ಲೋಬಲ್ ಕ್ಲೈಂಟ್ ಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದರು. 

ಇನ್ನುಇನ್ನೋವ ಸಲ್ಯೂಷನ್ಸ್ ಸೇರುವ ಮುನ್ನ ಶಾಂತಲಾ ಸದಾನಂದ ಗ್ಲೋಬಲ್ ಡೆಲಿವರಿ, ಫೈನಾನ್ಷಿಯಲ್ ಸರ್ವೀಸ್ ಕ್ಯಾಪಿಟಲ್ ಮಾರ್ಕೆಟ್ ವರ್ಟಿಕಲ್, ಟೆಕ್ನಾಲಜಿ ಸರ್ವೀಸಸ್, ನಿಯರ್ ಶೋರ್ ಸೆಂಟರ್ ಸೇರಿದಂತೆ ಅನೇಕ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ.ಮೆಂಡ್ ಕ್ರೆಸ್ಟ್ ನಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಹೆಕ್ಸವೇರ್ ನಲ್ಲಿ ಗ್ಲೋಬಲ್ ಬ್ಯಾಂಕಿಂಗ್ ಹಾಗೂ ಪೇಮೆಂಟ್ಸ್ ಮೇಲ್ವಿಚಾರಣೆ ನಡೆಸಿದ್ದರು.

ಶಿಷ್ಯೆಯನ್ನೇ ವಿವಾಹವಾಗಿರುವ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್, ಎಷ್ಟು ಕೋಟಿ ಒಡೆಯ ಗೊತ್ತಾ?

ಇನ್ನೋವ ಸಲ್ಯೂಷನ್ಸ್ ಗ್ಲೋಬಲ್ ಟೆಕ್ನಾಲಜಿ ಹಾಗೂ ಕನ್ಸಲ್ಟಿಂಗ್ ಕಂಪನಿಯಾಗಿದ್ದು, 1998ರಲ್ಲಿ ಪ್ರಾರಂಭವಾಯಿತು. ಇದರ ಮುಖ್ಯ ಕಚೇರಿ ಅಟ್ಲಾಂಟದಲ್ಲಿದೆ. ಈ ಸಂಸ್ಥೆ ಜಗತ್ತಿನಾದ್ಯಂತ 55,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಇನ್ನು ಇದರ ವಾರ್ಷಿಕ ಆದಾಯ 3 ಬಿಲಿಯನ್ ಡಾಲರ್. ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ವಿಮೆ, ಆರೋಗ್ಯ ಸೇವೆ ಹಾಗೂ ರಿಟೇಲ್ ಹಾಗೂ ಉತ್ಪಾದನೆ, ಕಮ್ಯೂನಿಕೇಷನ್, ಮೀಡಿಯಾ ಹಾಗೂ ಎಂಟರ್ ಟೈನ್ ಮೆಂಟ್, ಹೈಟೆಕ್ ಹಾಗೂ ಎನರ್ಜಿ ಮತ್ತು ಯುಟಿಲಿಟಿಸ್ ಸೇರಿದಂತೆ ವಿವಿಧ ವಲಯಗಳಲ್ಲಿ ಇನ್ನೋವ ಸಲ್ಯೂಷನ್ಸ್ ತನ್ನ ಬಲಿಷ್ಠವಾದ ಇರುವನ್ನು ಕಾಯ್ದುಕೊಂಡಿದೆ. 

Follow Us:
Download App:
  • android
  • ios