ಪ್ರತಿಷ್ಠಿತ ಆ್ಯಪಲ್ ಕಂಪನಿಯ ಮುಂದಿನ ಸಿಒಒ ಆಗಿ ಭಾರತೀಯ ಮೂಲದ ಸಭೀ ಖಾನ್ ಆಯ್ಕೆಯಾಗಿದ್ದಾರೆ. ಯಾರು ಈ ಸಭೀ ಖಾನ್? ಪ್ರತಿಷ್ಠಿತ ಕಂಪನಿಗಳ ಪ್ರಮುಖ ಸ್ಥಾನ ಇದೀಗ ಭಾರತೀಯಯ ಕೈಯಲ್ಲಿದೆ.

ವಾಶಿಂಗ್ಟನ್ (ಜು.11) ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪನಿಗಳ ಸಿಇಒ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಭಾರತೀಯ ಮೂಲದವರು ನಿರ್ವಹಿಸುತ್ತಿದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದೀಗ ಭಾರತೀಯ ಮೂಲದ ಸಭೀ ಖಾನ್ ಆ್ಯಪಲ್ ಸಿಒಒ ಆಗಿ ಆಯ್ಕೆಯಾಗಿದ್ದಾರೆ. ಸದ್ಯ ಆ್ಯಪಲ್ ಕಂಪನಿಯ ಸಿಒಒ ಜೆಫ್ ವಿಲಿಯಮ್ಸ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಸ್ಥಾನಕ್ಕೆ ಇದೀಗ ಸಭೀ ಖಾನ್ ಆಯ್ಕೆಯಾಗಿದ್ದಾರೆ. ಜುಲೈ ತಿಂಗಳ ಅಂತ್ಯದಲ್ಲಿ ಸಭೀ ಖಾನ್ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಕಳೆದ 30 ವರ್ಷಗಳಿಂದ ಆ್ಯಪಲ್‌ನಲ್ಲಿದ್ದಾರೆ ಸಭೀ ಖಾನ್

ಬರೋಬ್ಬರಿ 30 ವರ್ಷಗಳಿಂದ ಸಭೀ ಖಾನ್ ಆ್ಯಪಲ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಜವಾಬ್ದಾರಿಗಳನ್ನು ಸಭೀ ಖಾನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಗ್ಲೋಬಲ್ ಲಾಜಿಸ್ಟಿಕ್,ಉತ್ಪಾದನೆ, ಸೇರಿದಂತೆ ಹಲವು ವಿಭಾಗದಲ್ಲಿ ಸಭೀ ಖಾನ್ ಕೆಲಸ ಮಾಡಿದ್ದಾರೆ. ಸದ್ಯ ಆಪರೇಶನ್ ವಿಭಾಗ ಉಪಾಧ್ಯಕ್ಷರಾಗಿರುವ ಸಭೀ ಖಾನ್ , ಸಿಒಒ ಆಗಿ ಬಡ್ತಿ ಪಡೆದಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ನ ಸಭೀ ಖಾನ್

ಸಭೀ ಖಾನ್ ಮೂಲ ಉತ್ತರ ಪ್ರದೇಶದ ಮೊರಾದಾಬಾದ್. 1966ರಲ್ಲಿ ಮೊರಾದಾಬಾದ್‌ನಲ್ಲಿ ಹುಟ್ಟಿದ ಸಭೀ ಖಾನ್, ಬಾಲ್ಯದ ಶಿಕ್ಷಣವನ್ನು ಮೊರಾದಾಬಾದ್‌ನಲ್ಲೇ ಪಡೆದಿದ್ದಾರೆ. 5ನೇ ತರಗತಿಯಲ್ಲಿರುವಾಗ ಸಭೀ ಖಾನ್ ಕುಟುಂಬ ಸಿಂಗಾಪುರಕ್ಕೆ ಸ್ಥಳಾಂತರಗೊಂಡಿತ್ತು. ಕೆಲ ವರ್ಷಗಳ ಬಳಿಕ ಸಿಂಗಾಪೂರದಿಂದ ಅಮೆರಿಕಗೆ ಬಂದು ನೆಲೆಸಿತ್ತು.

ಅಮೆರಿಕದಲ್ಲಿ ಸಭೀ ಖಾನ್ ವಿದ್ಯಾಭ್ಯಾಸ ಮುಂದುವರಿಸಿದ್ದರು. ಟಫ್ಟ್ ವಿಶ್ವವಿದ್ಯಾಲಯದಿಂದ ಎಕಾನಾಮಿಕ್ಸ್ ಹಾಗೂ ಎಂಜಿನೀಯರಿಂಗ್ ಪದವಿ ಪಡೆದ ಸಭೀ ಖಾನ್, ಆರ್‌ಪಿಐ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಎಂಜಿನೀಯರಿಂಗ್ ಸಾತ್ನಕೋತ್ತರ ಪದವಿ ಪಡೆದಿದ್ದಾರೆ. ಆ್ಯಪಲ್ ಕಂಪನಿ ಸೇರಿಕೊಳ್ಳುವ ಮೊದಲು ಜಿಬಿ ಪ್ಲಾಸ್ಟಿಕ್ ಸೇರದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

1995ರಲ್ಲಿ ಆ್ಯಪಲ್ ಕಂಪನಿಗೆ ಸೇರಿದ ಸಭೀ ಖಾನ್

1995ರಲ್ಲಿ ಸಭೀ ಖಾನ್ ಆ್ಯಪಲ್ ಕಂಪನಿ ಸೇರಿಕೊಂಡರು ಪ್ರೊಕ್ಯುರ್‌ಮೆಂಟ್ ವಿಭಾಗದಲ್ಲಿ ಕೆಲಸ ಆರಂಭಿಸಿದ ಸಭೀ ಖಾನ್ ಹಂತ ಹಂತವಾಗಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. 58 ವರ್ಷದ ಸಭೀ ಖಾನ್ ಇದೀಗ ಆ್ಯಪಲ್ ಕಂಪನಿಯ ಚೀಪ್ ಆಪರೇಟಿಂಗ್ ಆಫೀಸರ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಇವರ ವೇತನ ಪ್ಯಾಕೇಜ್ ಕುರಿತ ಮಾಹಿತಿ ಬಹಿರಂಗವಾಗಿಲ್ಲ. 

ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳ ಪ್ರಮುಖರು ಭಾರತೀಯರಾಗಿದ್ದಾರೆ. ಇದೀಗ ಆ್ಯಪಲ್ ಪ್ರಮುಖ ಸ್ಥಾನವೂ ಭಾರತೀಯರ ಕೈಗೆ ಸಿಕ್ಕಿದೆ.