* ಕೃಷಿ, ಗಣಿಗಾರಿಕೆ, ಉತ್ಪಾದನಾ ವಲಯಗಳ ಚೇತರಿಕೆ ಎಫೆಕ್ಟ್* ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ.9.2ರಷ್ಟು ಏರಿಕೆ* ಕೊರೋನಾ ಪೂರ್ವದ ದಾಖಲೆ ಮೀರುವ ನಿರೀಕ್ಷೆ

ನವದೆಹಲಿ(ಜ.08): 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು 9.2ರಷ್ಟುಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಕೃಷಿ, ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳಲ್ಲಿ ಭಾರೀ ಚೇತರಿಕೆ ಕಂಡುಬಂದಿರುವ ಪರಿಣಾಮ ದೇಶದ ಆರ್ಥಿಕ ಬೆಳವಣಿಗೆಯು ಕೊರೋನಾ ಪೂರ್ವದ ಅವಧಿಯನ್ನು ಮೀರಲಿದೆ ಎಂದು ಸರ್ಕಾರ ಆಶಿಸಿದೆ.

ಶುಕ್ರವಾರ ಬಿಡುಗಡೆಯಾದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ(ಎನ್‌ಎಸ್‌ಒ)ಯ ರಾಷ್ಟ್ರೀಯ ಆದಾಯದ ವರದಿಯಲ್ಲಿ ದೇಶದ ಎಲ್ಲಾ ವಲಯಗಳ ಗಣನೀಯ ಪ್ರಮಾಣದ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

2011-12ರ ನೈಜ ಜಿಡಿಪಿಗೆ ಹೋಲಿಸಿದರೆ 2020-21ರಲ್ಲಿ ಭಾರತದ ಅಭಿವೃದ್ಧಿ ದರ 135.13 ಲಕ್ಷ ಕೋಟಿ ರು.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಈ ಎಲ್ಲಾ ಅಂದಾಜುಗಳನ್ನು ಮೀರಿ 2021-22ರಲ್ಲಿ ಭಾರತದ ನೈಜ ಅಭಿವೃದ್ಧಿ ದರ 147.54 ಲಕ್ಷ ಕೋಟಿ ರು.ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ತನ್ಮೂಲಕ ಕೊರೋನಾ ಪೂರ್ವದ 2019-20ರ ಜಿಡಿಪಿಯಾದ 145.69 ಲಕ್ಷ ಕೋಟಿ ರು. ಅಂದಾಜನ್ನು ಮೀರಲಿದೆ ಎನ್‌ಎಸ್‌ಒ ವರದಿಯಲ್ಲಿ ತಿಳಿಸಲಾಗಿದೆ.

ತನ್ಮೂಲಕ ಭಾರತದಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಕೊರೋನಾ ಪೂರ್ವದ ಸ್ಥಿತಿಗೆ ಮರಳಿದ್ದು, ಭಾರತದ ಜಿಡಿಪಿ ಅತೀವೇಗವಾಗಿ ಪ್ರಗತಿ ಸಾಗುತ್ತಿದೆ ಎಂಬ ಸಂದೇಶವಿದು ಎನ್ನಲಾಗಿದೆ.

2020-21ರ ಆರ್ಥಿಕ ವರ್ಷದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಹೇರಲಾಗಿತ್ತು. ಹೀಗಾಗಿ ಭಾರತದ ಅಭಿವೃದ್ಧಿ ದರ 7.3ರಷ್ಟುಸಂಕುಚಿತಗೊಂಡಿತ್ತು.