ವಾಷಿಂಗ್ಟನ್‌[ಜೂ.06]: ಅಧಿಕಾರಕ್ಕೇರಿದ ಕೂಡಲೇ ಪ್ರಗತಿ ದರ ಕುಸಿತದ ಸುದ್ದಿಯನ್ನು ಕೇಳಿದ್ದ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ವಿಶ್ವ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಮುಂದಿನ 3 ವರ್ಷಗಳಲ್ಲಿ ಭಾರತ ಶೇ.7.5ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಇದೇ ವರ್ಷ ಪ್ರಗತಿ ದರದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ ಎಂದೂ ಹೇಳಿದೆ.

ಜಾಗತಿಕ ಆರ್ಥಿಕ ಮುನ್ನೋಟವನ್ನು ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿದ್ದು, 2019-20ನೇ ಹಣಕಾಸು ವರ್ಷದಲ್ಲಿ ಶೇ.7.5ರ ದರದಲ್ಲಿ ಭಾರತ ಪ್ರಗತಿ ಹೊಂದಲಿದೆ. ಎರಡು ವರ್ಷ ಅದೇ ದರವನ್ನು ಉಳಿಸಿಕೊಳ್ಳಲಿದೆ. ಚೀನಾದ ಜಿಡಿಪಿ ಹಾಲಿ ಶೇ.6.6ರಷ್ಟಿದ್ದು, ಈ ವರ್ಷ ಶೇ.6.2ಕ್ಕೆ ಕುಸಿಯಲಿದೆ. 2021ರ ವೇಳೆಗೆ ಶೇ.6ಕ್ಕೆ ತಗ್ಗಲಿದೆ. ಆಗ ಭಾರತದ ಜಿಡಿಪಿ ಚೀನಾದ್ದಕ್ಕಿಂತ ಶೇ.1.5ರಷ್ಟುಹೆಚ್ಚಿರಲಿದೆ ಎಂದು ತಿಳಿಸಿದೆ.

2018-19ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.5.8ಕ್ಕೆ ಕುಸಿದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಹೇಳಿತ್ತು. ಒಟ್ಟಾರೆ 2018-19ರಲ್ಲಿ ಭಾರತದ ಜಿಡಿಪಿ ಶೇ.6.2ರಷ್ಟಿದ್ದರೆ, ಚೀನಾದ್ದು ಶೇ.6.6ರಷ್ಟಿತ್ತು.