‘ಹ್ಯಾಮ್ಲೇಸ್‌’ ಕಂಪೆನಿ ಮುಕೇಶ್‌ ಅಂಬಾನಿ ತೆಕ್ಕೆಗೆ| 600 ಕೋಟಿ ರು.ಗೆ ಡೀಲ್‌

ಮುಂಬೈ[ಮೇ.11]: ಭಾರತದ ಅತೀ ಶ್ರೀಮಂತ ವ್ಯಕ್ತಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಆಟಿಕೆಗಳ ಮಾರಾಟದಲ್ಲಿ ವಿಶ್ವದ ಹಳೆಯ ಹಾಗೂ ಬೃಹತ್‌ ಬ್ರಾಂಡ್‌ ಆಗಿರುವ ಹ್ಯಾಮ್ಲೇಸ್‌ ಅನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. 259 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಹ್ಯಾಮ್ಲೇಸ್‌ ಆಟಿಕೆಗಳ ಬ್ರಾಂಡ್‌ ಅನ್ನು ಚಿ. ಬ್ಯಾನರ್‌ ಇಂಟರ್‌ನ್ಯಾಷನಲ್‌ ಹೋಲ್ಡಿಂಗ್‌ ಕಂಪನಿಯಿಂದ ಮುಕೇಶ್‌ ಅಂಬಾನಿ ಅವರು ಸುಮಾರು 616 ಕೋಟಿ ರು.(88 ಮಿಲಿಯನ್‌ ಅಮೆರಿಕ ಡಾಲರ್‌)ಗೆ ಖರೀದಿ ಮಾಡಿದ್ದಾರೆ.

1760ರಲ್ಲಿ ಸ್ಥಾಪನೆಗೊಂಡಿರುವ ಹ್ಯಾಮ್ಲೇಸ್‌ ವಿಶ್ವದ 18 ರಾಷ್ಟ್ರಗಳಲ್ಲಿ ಒಟ್ಟಾರೆ 167 ಸ್ಟೋರ್‌ಗಳನ್ನು ಹೊಂದಿದೆ. ಅಲ್ಲದೆ, ಭಾರತದ 29 ನಗರಗಳಲ್ಲಿ 88 ಹ್ಯಾಮ್ಲೇಸ್‌ ಸ್ಟೋರ್‌ಗಳು ವಹಿವಾಟಿನಲ್ಲಿ ತೊಡಗಿವೆ. ಈ ಖರೀದಿ ಪ್ರಕ್ರಿಯೆಯಿಂದಾಗಿ ರಿಲಯನ್ಸ್‌ನ ರೀಟೆಲ್‌ ವ್ಯವಹಾರ ವಿವಿಧ ದೇಶಗಳಿಗೂ ವಿಸ್ತರಣೆಯಾದಂತಾಗಿದೆ. ಹ್ಯಾಮ್ಲೇಸ್‌ ಸಂಸ್ಥೆ ಕಳೆದ ವರ್ಷದಲ್ಲಿ ಸುಮಾರು 84 ಕೋಟಿ ರು. ನಷ್ಟ ಅನುಭವಿಸಿತ್ತು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್‌ ಬ್ರಾಂಡ್‌ ಲಿ. ಸಿಇಒ ದರ್ಶನ್‌ ಮೆಹ್ತಾ ಅವರು, ‘ವಿಶ್ವದ ಅತಿ ಹಳೆಯ ಹ್ಯಾಮ್ಲೇಸ್‌ ಗೊಂಬೆಗಳ ಬ್ರಾಂಡ್‌ ಇದೀಗ ರಿಲಯನ್ಸ್‌ ಒಡೆತನಕ್ಕೆ ಒಳಪಟ್ಟಿದೆ. ಈ ಮೂಲಕ ದೀರ್ಘಕಾಲೀನ ಕನಸೊಂದು ನನಸಾಗಿದೆ’ ಎಂದಿದ್ದಾರೆ.