Asianet Suvarna News Asianet Suvarna News

ಭಲೇ ರೈತ: ಆಹಾರ ಉತ್ಪಾದನೆ ಎಷ್ಟಾಗಿದೆ ಗೊತ್ತಾ?

ಆಹಾರ ಉತ್ಪಾದನೆಯಲ್ಲಿ ದಾಖಲೆ ಬರೆದ ಭಾರತ! ಉತ್ಪಾದನೆ 28.4 ಕೋಟಿ ಟನ್‌ಗಳಿಗೆ ಏರಿಕೆಯಾಗಲಿದೆ! ಗೋಧಿ, ಅಕ್ಕಿ, ಬೇಳೆ ಕಾಳು, ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಳ!
ಫಲಿಸಿದ ಮೋದಿ ಸರ್ಕಾರದ ಕೃಷಿ ನೀತಿ 

India's foodgrain output to touch new record of 284.83 million tonnes
Author
Bengaluru, First Published Aug 29, 2018, 3:45 PM IST

ನವದೆಹಲಿ(ಆ.29): ದೇಶಕ್ಕೆ ಅನ್ನ ಕೊಡುವ ರೈತ ಸಂಕಷ್ಟದಲ್ಲಿದ್ದಾನೆ. ಆದರೆ ತನ್ನ ಸಂಕಷ್ಟವನ್ನು ನುಂಗಿಕೊಂಡೇ ದೇಶಕ್ಕೆ ತನ್ನ ಸೇವೆಯನ್ನು ರೈತ ಭಾಂಧವ ಮುಂದುವರೆಸಿದ್ದಾನೆ. ಇದೇ ಕಾರಣಕ್ಕೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆ 2017-18ರಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಕೇಂದ್ರ ಸರ್ಕಾರ  ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತದ ಆಹಾರ ಧಾನ್ಯಗಳ ಉತ್ಪಾದನೆ 28.4 ಕೋಟಿ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.  2016-17ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ  27.5 ಕೋಟಿ ಟನ್‌ ಉತ್ಪಾದನೆಯಾಗಿತ್ತು. 

ಗೋಧಿ, ಅಕ್ಕಿ, ಬೇಳೆ ಕಾಳು, ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಾಗಿದ್ದು, ವಾಡಿಕೆಯ ಮುಂಗಾರು ಮಳೆ ಹಾಗೂ ಕೇಂದ್ರ ಸರ್ಕಾರ  ತೆಗೆದುಕೊಂಡ ಹಲವಾರು ಸುಧಾರಣಾ ಕ್ರಮಗಳಿಂದ ಸಮೃದ್ಧ ಉತ್ಪಾದನೆ ದಾಖಲಾಗಿದೆ ಎಂದು ಕೃಷಿ ಸಚಿವಾಲಯದ ಪರಿಷ್ಕೃತ ಅಂದಾಜು ವರದಿ ತಿಳಿಸಿದೆ. 

2018ರ ಜೂನ್‌ಗೆ ಅಂತ್ಯವಾದ 2017-18ರ ಬೆಳೆ ವರ್ಷದಲ್ಲಿ ಗೋಧಿಯ ಉತ್ಪಾದನೆ ದಾಖಲೆಯ 9.9 ಕೋಟಿ ಟನ್‌ಗೆ ಏರಿದೆ. ಅಕ್ಕಿ 11.2 ಕೋಟಿ ಟನ್‌, ಬೇಳೆ ಕಾಳು 2.5 ಕೋಟಿ ಟನ್‌ ಉತ್ಪಾದನೆಯಾಗಿದೆ. ಇದು ಇಲಾಖೆಯ 4ನೇ ಪರಿಷ್ಕೃತ ಅಂದಾಜು ಎಂದು ಇಲಾಖೆ ತಿಳಿಸಿದೆ. 

ಗೋಧಿಯ ಉತ್ಪಾದನೆಯಲ್ಲಿ 10 ಲಕ್ಷ ಟನ್‌, ಅಕ್ಕಿಯಲ್ಲಿ 13 ಲಕ್ಷ ಟನ್‌ ಏರಿಕೆ ದಾಖಲಾಗಿದೆ. ತೈಲ ಬೀಜಗಳ ಉತ್ಪಾದನೆಯಲ್ಲೂ 3.13 ಕೋಟಿ ಟನ್‌ಗೆ ಸಮೃದ್ಧಿಯಾಗಿದೆ. ವಾಣಿಜ್ಯ ಬೆಳೆಗಳ ಪೈಕಿ ಕಬ್ಬು ಉತ್ಪಾದನೆ ದಾಖಲೆಯ 37.6 ಕೋಟಿ ಟನ್‌ಗೆ ಹೆಚ್ಚಳವಾಗಿದೆ.

ಪ್ರಸಕ್ತ ಸಾಲಿನಲ್ಲೂ ಉತ್ತಮ ಮುಂಗಾರಿನಿಂದ ನೀರಿನ ಲಭ್ಯತೆ ಇದೆ. ಹೀಗಾಗಿ ಮುಂಬರುವ ರಾಬಿ (ಚಳಿಗಾಲದ ಬೆಳೆ) ಬೆಳೆಗೆ ಅನುಕೂಲಕರ ಪರಿಸ್ಥಿತಿ ಉಂಟಾಗಿದೆ. ಭೀಕರ ನೆರೆಯ ಪರಿಣಾಮ ದಕ್ಷಿಣ ಭಾರತದಲ್ಲಿ ಕಾಫಿ, ಚಹಾ ಬೆಳೆಗೆ ಅಗಾಧ ಹಾನಿಯಾಗಿದೆ ಎಂದು ಕೃಷಿ ಸಚಿವಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios