ಭಾರತ-ಜಪಾನ್ ನಡುವೆ ಮಹತ್ವದ ಆರ್ಥಿಕ ಒಪ್ಪಂದ! 75 ಶತಕೋಟಿ ಡಾಲರ್ ಮೌಲ್ಯದ ಕರೆನ್ಸಿ ವಿನಿಮಯ! ನರೇಂದ್ರ ಮೋದಿ, ಶಿಂಜೋ ಅಬೆ ಮಾತುಕತೆ ಫಲಪ್ರದ! ರೂಪಾಯಿ ಮೌಲ್ಯ ಸ್ಥಿರತೆ ಕಾಪಾಡಲು ಸಹಾಯಕ! ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧ್ಯತೆ
ಟೋಕಿಯೋ(ಅ.30): ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಐದನೇ ಶೃಂಗಸಭೆ ಮುಕ್ತಾಯಗೊಳಿಸಿದ್ದು, ಉಭಯ ದೇಶಗಳು ಮಹತ್ವದ 75 ಶತಕೋಟಿ ಡಾಲರ್ ಮೌಲ್ಯದ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಮಹತ್ವದಿಂದ ಒಪ್ಪಂದಿಂದ ಭಾರತದ ರೂಪಾಯಿ ಮೌಲ್ಯ ಹಾಗೂ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ-ಜಪಾನ್ ನಡುವೆ ಹೆಚ್ಚುತ್ತಿರುವ ವ್ಯೂಹಾತ್ಮಕ ಏಕತೆಯಿಂದ ಉಭಯ ದೇಶಗಳಿಗೂ ಅನುಕೂಲವಾಗಿದ್ದು, ಕರೆನ್ಸಿ ವಿನಿಮಯ ಒಪ್ಪಂದದಿಂದ ಭಾರತದಲ್ಲಿ ಲಭ್ಯವಿರುವ ವಿದೇಶಿ ಬಂಡವಾಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಅವಕಾಶ ದೊರೆಯಲಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
2013ರಲ್ಲೂ ರೂಪಾಯಿ ತೀವ್ರ ಒತ್ತಡದಲ್ಲಿದ್ದಾಗ ಭಾರತ ಮತ್ತು ಜಪಾನ್‌ಗಳು ಕರೆನ್ಸಿ ವಿನಿಮಯವನ್ನು 15 ಶತಕೋಟಿ ಡಾಲರ್‌ಗಳಿಂದ 50 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಂಡಿದ್ದವು.
ಉಭಯ ನಾಯಕರ ಶೃಂಗಸಭೆಯ ಬಳಿಕ ಬಿಡುಗಡೆ ಮಾಡಿದ ಭಾರತ- ಜಪಾನ್ ಮುನ್ನೋಟ ಹೇಳಿಕೆಯಲ್ಲಿ, ಕರೆನ್ಸಿ ವಿನಿಮಯವನ್ನು ಸ್ವಾಗತಿಸಲಾಗಿದೆ. ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುವಲ್ಲಿ ಈ ಕರೆನ್ಸಿ ವಿನಿಮಯ ಒಪ್ಪಂದ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಯಶಸ್ವಿ ಜಪಾನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಆಗಮಿಸಿದ್ದಾರೆ.
