ಚೀನಾ ವಿರುದ್ಧ ಭಾರತಕ್ಕೆ ಸಿಗಲಿದೆ ಮತ್ತೊಂದು ಜಯ! ಆರ್ಥಿಕಾಭಿವೃದ್ಧಿಯಲ್ಲಿ ಚೀನಾ ಹಿಂದಿಕ್ಕಲಿದೆ ಭಾರತ! ಹೊರಬಿತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯ ವರದಿ! ಭಾರತದಲ್ಲಿ ವೇಗ ಪಡೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳು! ಮುಂದಿನ ವರ್ಷ ಚೀನಾ ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಭಾರತ

ನವದೆಹಲಿ(ಅ.9): ಭಾರತದ ಪ್ರಸಕ್ತ ಆರ್ಥಿಕ ಅಭಿವೃದ್ಧಿ ಈ ವರ್ಷ ಶೇಕಡಾ 7.3ರಷ್ಟಿದ್ದು, ಮುಂದಿನ ವರ್ಷ ಶೇಕಡಾ 7.4ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂಬ ಬಿರುದನ್ನು ಭಾರತ ಈ ವರ್ಷ ಚೀನಾವನ್ನು ಹಿಂದಿಕ್ಕಿ ಪಡೆದುಕೊಳ್ಳುವ ಸಾಧ್ಯತೆಯಿದೆ.

ಕಳೆದ ವರ್ಷ ಭಾರತದ ಆರ್ಥಿಕಾಭಿವೃದ್ಧಿ ಶೇಕಡಾ 6.7ರ ದರದಲ್ಲಿತ್ತು. ಭಾರತದ ಆರ್ಥಿಕತೆ ಬೆಳವಣಿಗೆಯಾಗಲು ಮುಖ್ಯ ಕಾರಣ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಹಲವು ಸುಧಾರಣಾ ಕ್ರಮಗಳು ಎಂದು ಐಎಂಎಫ್ ವರದಿ ವಿಶ್ವ ಆರ್ಥಿಕ ಹೊರನೋಟ(ಡಬ್ಲ್ಯುಇಒ)ದಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ತರಲಾಗಿರುವ ಆರ್ಥಿಕ ಸುಧಾರಣೆಗಾಳಾದ ಸರಕು ಮತ್ತು ಸೇವಾ ತೆರಿಗೆ, ಹಣದುಬ್ಬರ ನಿಯಂತ್ರಣ, ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ವಿದೇಶಿ ಹೂಡಿಕೆಯ ಉದಾರೀಕರಣ ಮುಂತಾದ ಕ್ರಮಗಳಿಂದ ಭಾರತದ ಆರ್ಥಿಕತೆ ವೇಗದ ಗತಿಯಲ್ಲಿ ಬೆಳವಣಿಗೆಯಾಗುತ್ತಿದೆ ಎಂದು ವರದಿ ತಿಳಿಸಿದೆ.

ಕರೆನ್ಸಿಗಳ ವಿನಿಮಯ ಉಪಕ್ರಮ ಮತ್ತು ಜಿಎಸ್ ಟಿಗಳ ಜಾರಿಯಿಂದ ಆರ್ಥಿಕತೆಗೆ ಸ್ವಲ್ಪ ಮಟ್ಟಿನ ಪೆಟ್ಟು ಬಿದ್ದರೂ ಕೂಡ, ಹೂಡಿಕೆಯಲ್ಲಿ ಹೆಚ್ಚಳ ಮತ್ತು ಖಾಸಗಿ ಬಳಕೆಯ ಹೆಚ್ಚಳದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ವೇಗವಾಗಿದೆ ಎಂದು ಹೇಳಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಚೀನಾ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಚೀನಾ ಆರ್ಥಿಕ ಬೆಳವಣಿಗೆಯಲ್ಲಿ ಭಾರತಕ್ಕಿಂತ ಶೇ.0.2ರಷ್ಟು ಮುಂದಿತ್ತು. ಅದರಂತೆ ಅಮೆರಿಕದ ಆರ್ಥಿಕತೆ 2018ರಲ್ಲಿ ಶೇ.2.9ರಿಂದ 2019ರಲ್ಲಿ ಶೇ.2.5ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.