ವಾಷಿಂಗ್ಟನ್(ಅ.12): ವಿಶ್ವದ ಯಾವುದೇ ರಾಷ್ಟ್ರ ಇರಾನ್ ಜೊತೆ ತೈಲ ಒಪ್ಪಂದ ಮಾಡಿಕೊಳ್ಳುವುದು, ರಷ್ಯಾ ಜೊತೆಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದು ಸದ್ಯ ಅಮೆರಿಕಕ್ಕೆ ಇಷ್ಟವಿಲ್ಲ. ಆದರೆ ಈ ಎರಡೂ ಕೆಲಸವನವನು ಭಾರತ ಅತ್ಯಂತ ಹೆಮ್ಮೆಯಿಂದ ಮಾಡಿದೆ.

ಇದೇ ನವೆಂಬರ್ 4 ರಿಂದ ಇರಾನ್ ಮೇಲೆ ಅಮೆರಿಕದ ನಿರ್ಬಂಧ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಹೀಗಾಗಿ ಜಗತ್ತಿನ ಇತರ ರಾಷ್ಟ್ರಗಳು ಇರಾನ್ ಜೊತೆಗಿನ ತೈಲ ಒಪ್ಪಂದವನ್ನು ಕಡಿತಗೊಳಿಸಬೇಕಿದೆ. ಭಾರತ ಕೂಡ ಇದಕ್ಕೆ ಹೊರತಲ್ಲ.

ಆದರೆ ಅಮೆರಿಕದ ಈ ಏಕಪಕ್ಷೀಯ ನಿರ್ಧಾರಕ್ಕೆ ಅಡ್ಡಗಾಲು ಹಾಕಿರುವ ಭಾರತ, ಇರಾನ್‌ನಿಂದ ತೈಲ ಆಮದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನಮ್ಮ ತೈಲ ಬೇಡಿಕೆಗೆ ಇರಾನ್ ಮೂಲಾಧಾರವಾಗಿದ್ದು, ಅದರೊಂದಿಗೆ ವಾಣಿಜ್ಯ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.

ಅದರಂತೆ ರಷ್ಯಾ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಜಗತ್ತಿನ ಯಾವುದೇ ರಾಷ್ಟ್ರ ತನ್ನ ವಿರೋಧಿ ಎಂದು ಪರಿಗಣಿಸಲ್ಪಡುವ ಕಾನೂನನ್ನು ಅಮೆರಿಕ ಇತ್ತೀಚಿಗಷ್ಟೇ ಪಾಸು ಮಾಡಿದೆ.

ಈ ನಡುವೆಯೇ ಭಾರತ ಎಸ್-400 ಟ್ರಯಂಫ್ ಖರೀದಿ ಒಪ್ಪಂದವನ್ನು ರಷ್ಯಾದೊಂದಿಗೆ ಮಾಡಿಕೊಂಡಿದೆ. ಅಂದರೆ ಅಮೆರಿಕ ಹೇಳುತ್ತಿರುವ ಯಾವುದೇ ಮಾತನ್ನು ಭಾರತ ಕೇಳುತ್ತಿಲ್ಲ. ಇದೇ ಕಾರಣಕ್ಕೆ ಟ್ರಂಪ್ ತುಸು ಗಲಿಬಿಲಿಗೊಂಡವರಂತೆ ಕಾಣುತ್ತಿದ್ದಾರೆ.

ಹೀಗಾಗಿಯೇ ಭಾರತವನ್ನು ಎಚ್ಚರಿಸುವ ಹೇಳಿಕೆಗಳನ್ನು ದಿನವೂ ನೀಡಲು ಟ್ರಂಪ್ ಶುರು ಮಾಡಿದಂತಿದೆ. ನಿನ್ನೆಯಷ್ಟೇ ಇರಾನ್ ಜೊತೆ ವಾಣಿಜ್ಯ ಸಂಬಂಧ ಮುಂದುವರೆಸುವ ರಾಷ್ಟ್ರಗಳನ್ನು 'ನೋಡಿಕೊಳ್ಳಲಾಗುವುದು' ಎಂದು ಬೆದರಿಕೆಯೊಡ್ಡಿದ್ದ ಟ್ರಂಪ್ , ಇಂದು ಇರಾನ್ ಮತ್ತು ರಷ್ಯಾ ಜೊತೆ ಕೈಜೋಡಿಸಿರುವ ಭಾರತ ತಪ್ಪು ಮಾಡುತ್ತಿದೆ ಎಂದು ನೇರವಾಗಿಯೇ ಹೇಳಿದ್ದಾರೆ.

ಇರಾನ್ ಜೊತೆ ತೈಲ ಒಪ್ಪಂದ ಮತ್ತು ರಷ್ಯಾ ಜೊತೆ ರಕ್ಷಣಾ ಒಪ್ಪಂದ ಎರಡೂ ಭಾರತಕ್ಕೆ ಸಹಾಯಕಾರಿಯಲ್ಲ ಎಂದಿರುವ ಟ್ರಂಪ್, ಅಮೆರಿಕದೊಡನೆ ಇರುವುದು ಭಾರತಕ್ಕೆ ಹೆಚ್ಚಿನ ಲಾಭ ತಂದು ಕೊಡಬಲ್ಲದು ಎಂದು ಹೇಳಿದ್ದಾರೆ.

ಆದರೆ ಟ್ರಂಪ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ ಭಾರತ, ನಮ್ಮ ಸಾರ್ವಭೌಮತೆ ಮತ್ತು ವಿದೇಶಾಂಗ ನೀತಿಯ ಮೇಲೆ ಮತ್ತೊಬ್ಬರು ಸವಾರಿ ಮಾಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.