*2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು*ತಪ್ಪು ಮಾಹಿತಿಗಳಿರುವ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ*ಐಟಿಆರ್ ತಿರಸ್ಕರಿಸಲ್ಪಟ್ಟರೆ ಮತ್ತೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬೇಕು

Business Desk: 2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಅಡಿಟ್ ಗೊಳಪಡೋ ಇತರ ತೆರಿಗೆದಾರರಿಗೆ ರಿಟರ್ನ್ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನಾಂಕ. ಆದಾಯ ತೆರಿಗೆ ರಿಟರ್ನ್ (ITR) ಮೂಲತಃ ಒಂದು ದಾಖಲೆಯಾಗಿದ್ದು,ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಫೈಲ್ ಮಾಡಲಾಗುತ್ತದೆ.ಇದರಲ್ಲಿ ಆ ವ್ಯಕ್ತಿಯ ಆದಾಯ,ಲಾಭ ಹಾಗೂ ನಷ್ಟಗಳ ಜೊತೆಗೆ ಇತರ ತೆರಿಗೆ ಕಡಿತಗಳ ಮಾಹಿತಿಗಳೂ ಇರುತ್ತವೆ. ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕದ ತನಕ ಕಾಯದೆ ಆದಷ್ಟು ಬೇಗ ಫೈಲ್ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ಇನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವಾಗ ಬಹುತೇಕರು ಗಡಿಬಿಡಿಯಲ್ಲಿ ಫೈಲ್ ಮಾಡಿ ಬಿಡುತ್ತಾರೆ. ಇದ್ರಿಂದ ಅಗತ್ಯ ಮಾಹಿತಿಗಳು ನಮೂದಾಗಿರೋದಿಲ್ಲ. ಇನ್ನೂ ಕೆಲವರು ಕಾಟಾಚಾರಕ್ಕೆ ಐಟಿಆರ್ ಫೈಲ್ ಮಾಡುತ್ತಾರೆ. ಆದ್ರೆ ಈ ರೀತಿ ತಪ್ಪುಗಳಿಂದ ಕೂಡಿರುವ ಅಥವಾ ಅಪೂರ್ಣವಾಗಿರುವ ಐಟಿಆರ್ ಸಲ್ಲಿಕೆಯನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ. ಆದಾಯ ತೆರಿಗೆ ಇಲಾಖೆ ಇಂಥ ತೆರಿಗೆದಾರರಿಗೆ ನೋಟಿಸ್ ನೀಡುತ್ತದೆ. ಆಗ ಇನ್ನೊಮ್ಮೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಯಾವುದೇ ದಂಡ ಅಥವಾ ಮಿತಿಯಿಲ್ಲ. ಆದ್ರೆ ಐಟಿಆರ್ ಸಲ್ಲಿಕೆ ಸಂದರ್ಭದಲ್ಲೇ ಮಾಹಿತಿಗಳನ್ನು ಸರಿಯಾಗಿ ನೀಡಿದರೆ ಮತ್ತೆ ಮತ್ತೆ ಸಲ್ಲಿಕೆ ಮಾಡುವ ಕಿರಿಕಿರಿ ತಪ್ಪುತ್ತದೆ. ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ ಬಹುತೇಕರು ಈ 6 ತಪ್ಪುಗಳಲ್ಲಿ ಒಂದನ್ನು ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು?

1. ಸೂಕ್ತ ಐಟಿಆರ್ ಅರ್ಜಿ ಭರ್ತಿ ಮಾಡಿ
ಆದಾಯ ತೆರಿಗೆ ಇಲಾಖೆ (Income Tax department) ಎಲ್ಲ ವಿಧದ ತೆರಿಗೆದಾರರಿಗೆ (Taxpayers) ಐಟಿಆರ್ ಅರ್ಜಿಗಳನ್ನು (ITR forms) ನಿಗದಿಪಡಿಸಿದೆ. ಆದಾಯದ ಮಾರ್ಗವನ್ನು ಆಧಾರಿಸಿ ಯಾವ ವಿಧದ ಐಟಿಆರ್ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಒಂದು ವೇಳೆ ನೀವು ತಪ್ಪು ಅರ್ಜಿಯನ್ನು ಆಯ್ದುಕೊಂಡರೆ, ಆಗ ಆದಾಯ ತೆರಿಗೆ ಇಲಾಖೆ ನಿಮ್ಮ ಐಟಿಆರ್ ತಿರಸ್ಕರಿಸುತ್ತದೆ. ಅಲ್ಲದೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 (5) ಅಡಿಯಲ್ಲಿ ಪರಿಷ್ಕೃತ ರಿಟರ್ನ್ (Revised ITR) ಸಲ್ಲಿಕೆ ಮಾಡುವಂತೆ ನಿಮ್ಮನ್ನು ಕೋರುತ್ತದೆ.

WPI Inflation:ಜೂನ್ ತಿಂಗಳಲ್ಲಿ ಸಗಟು ಹಣದುಬ್ಬರ ಶೇ.15.18ಕ್ಕೆ ಇಳಿಕೆ; ಅಗತ್ಯ ವಸ್ತುಗಳ ಬೆಲೆ ತಗ್ಗುತ್ತಾ?

2.ಆದಾಯದ ಮಾಹಿತಿಗಳು
ಆದಾಯ ತೆರಿಗೆ ಮಾಹಿತಿಗಳನ್ನು ಸಮರ್ಪಕವಾಗಿ ನೀಡದಿದ್ರೆ, ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಕಳುಹಿಸುತ್ತದೆ. ಹೀಗಾಗಿ ತೆರಿಗೆದಾರರು ಉಳಿತಾಯ ಖಾತೆ (Saving account) ಮೇಲೆ ಗಳಿಸಿದ ಬಡ್ಡಿ (Interest) ಹಾಗೂ ಬಾಡಿಗೆಯಿಂದ (Rent) ಬಂದ ಆದಾಯ ಸೇರಿದಂತೆ ಪೂರ್ಣ ಆದಾಯದ ಮಾಹಿತಿಗಳನ್ನು ಘೋಷಣೆ ಮಾಡಬೇಕು. 

3.ಅರ್ಜಿ 26 ಎಎಸ್
ಎಷ್ಟು ಮೊತ್ತದ ಟಿಡಿಎಸ್ ಕಡಿತವಾಗಿದೆ (TDS deducted) ಎಂಬ ಮಾಹಿತಿಯನ್ನು ನಿಮಗೆ ಅರ್ಜಿ 26 ಎಎಸ್ (Form 26 AS) ನೀಡುತ್ತದೆ. ಹೀಗಾಗಿ ನಿಮ್ಮ ಆದಾಯ ತೆರಿಗೆ ರಿಫಂಡ್ ಗಾಗಿ ಮಾಹಿತಿಗಳನ್ನು ಭರ್ತಿಮಾಡುವಾಗ ಅರ್ಜಿ 26 ಎಎಸ್ ಜೊತೆಗೆ ಅರ್ಜಿ 16/16A ಇಟ್ಟುಕೊಂಡು ನೀವು ಕ್ಲೆಮ್ ಮಾಡಿರುವ ಆದಾಯ ಸರಿಯಾಗಿದೆಯಾ ಎಂದು ಪರಿಶೀಲಿಸಬೇಕು. ಇದು ನಿಮಗೆ ಯಾವುದೇ ಆದಾಯ ಹಾಗೂ ತೆರಿಗೆ ಸಂಬಂಧಿ ಲೆಕ್ಕಾಚಾರದ ತಪ್ಪುಗಳನ್ನು ನಿರ್ಲಕ್ಷಿಸಲು ನೆರವು ನೀಡುತ್ತದೆ. 

4.ತೆರಿಗೆ ರಿಟರ್ನ್ ಪರಿಶೀಲಿಸಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ರೆ ಮುಗಿಯೋದಿಲ್ಲ, ಅದರ ಪರಿಶೀಲನೆ ಕೂಡ ಕಡ್ಡಾಯ. ಬಹುತೇಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಬಳಿಕ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ, ಆದಾಯ ತೆರಿಗೆ ರಿಟರ್ನ್ ಪರಿಶೀಲನೆ ಮಾಡಿದ ಬಳಿಕವೇ ಆ ಪ್ರಕ್ರಿಯೆ ಸಂಪೂರ್ಣವಾಗೋದು. ಐಟಿಆರ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು. ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ. ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ಕೂಡ ಐಟಿಆರ್ ಇ-ಪರಿಶೀಲನೆ ಮಾಡಬಹುದು.

SBI Charges:ನೀವು ಎಸ್ ಬಿಐ ಗ್ರಾಹಕರೇ? ಹಾಗಿದ್ರೆ ಈ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ

5.ಉಡುಗೊರೆಗಳನ್ನು ನಮೂದಿಸಿ
ಆದಾಯ ತೆರಿಗೆ ನಿಯಮಗಳಡಿಯಲ್ಲಿ ಒಂದು ವೇಳೆ ನೀವು 50,000ರೂ.ಗಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ಪಡೆದಿದ್ದರೆ, ನೀವು ಅದರ ಮೇಲೆ ತೆರಿಗೆ ಪಾವತಿಸಬೇಕು. ನೀವು ಐಟಿಆರ್ ಅರ್ಜಿಯಲ್ಲಿ ಆ ಮೊತ್ತವನ್ನು ಕೂಡ ಘೋಷಣೆ ಮಾಡೋದು ಅಗತ್ಯ.

6.ವಿದೇಶಿ ಬ್ಯಾಂಕ್ ಖಾತೆಗಳು
ಒಂದು ವೇಳೆ ನೀವು ವಿದೇಶದಲ್ಲಿ ಖಾತೆ ಹೊಂದಿದ್ರೆ, ಆದಾಯ ತೆರಿಗೆ ಇಲಾಖೆಗೆ ಆ ಕುರಿತ ಮಾಹಿತಿಗಳನ್ನು ಒದಗಿಸಬೇಕು. ಹಾಗೆಯೇ ವಿದೇಶದಲ್ಲಿ ಯಾವುದೇ ಹೂಡಿಕೆ ಮಾಡಿದ್ದರೂ ಆ ಬಗ್ಗೆ ಐಟಿಆರ್ ನಲ್ಲಿ ನಮೂದಿಸೋದು ಅತ್ಯಗತ್ಯ.