6,000 ಕೋಟಿ ರೂ. ವ್ಯವಹಾರದಲ್ಲಿ ತೆರಿಗೆ ವಂಚನೆ; ದೈನಿಕ್ ಭಾಸ್ಕರ್ ಗ್ರೂಪ್ ಮೇಲೆ IT ದಾಳಿ, ಶೋಧ!
- ದೈನಿಕ್ ಭಾಸ್ಕರ್ ಮೇಲೆ ಐಟಿ ಇಲಾಖೆ ದಾಳಿ, ಶೋಧ ಕಾರ್ಯ
- 6,000 ಕೋಟಿ ರೂಪಾಯಿ ವ್ಯವಹಾರದಲ್ಲಿ ಅಕ್ರಮ
- ತೆರಿಗೆ ಪಾವತಿಯಲ್ಲಿ ವಂಚನೆ, ದೈನಿಕ್ ಗ್ರೂಪ್ ಸಂಸ್ಥೆಗಳ ಮೇಲೆ ದಾಳಿ
ನವದೆಹಲಿ(ಜು.22): ಆದಾಯ ತೆರಿಗೆ ವಂಚನೆ ಪ್ರಕರಣದಡಿ ಭಾರತೀಯ ಐಟಿ ಇಲಾಖೆ ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆ ಸೇರಿದಂತೆ ದೈನಿಕ್ ಭಾಸ್ಕರ್ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. ಮುಂಬೈ, ದೆಹಲಿ, ಭೋಪಾಲ್, ಇಂದೋರ್, ಜೈಪುರ, ಕೊರ್ಬಾ, ನೋಯ್ಡಾ ಮತ್ತು ಅಹಮದಾಬಾದ್ ನಗರಗಳಲ್ಲಿರುವ ದೈನಿಕ್ ಭಾಸ್ಕರ್ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ತೆರಿಗೆ ವಂಚನೆ ಆರೋಪ: ದೈನಿಕ್ ಭಾಸ್ಕರ್ ಸೇರಿ ಹಲವೆಡೆ ಐಟಿ ದಾಳಿ!
ಮಾಧ್ಯಮ, ವಿದ್ಯುತ್, ಜವಳಿ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಒಟ್ಟು 32 ವಿವಿದ ರೀತಿಯ ವಹಿವಾಟಿನಲ್ಲಿ ಜನಪ್ರಿಯವಾಗಿರುವ ದೈನಿಕ್ ಭಾಸ್ಕರ್, ಬರೋಬ್ಬರಿ 6,000 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಆದಾಯ ತೆರಿಗೆ ಪಾವತಿಯಲ್ಲಿ ದೈನಿಕ್ ಭಾಸ್ಕರ್ ಭಾರಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಐಟಿ ಇಲಾಖೆ ದಾಳಿ ನಡೆಸಿದೆ.
ದೈನಿಕ್ ಭಾಸ್ಕರ್ ಮೇಲೆ ನಕಲಿ ವೆಚ್ಚ ಮತ್ತು ಶೆಲ್ ಘಟಕಗಳನ್ನು ಬಳಸಿಕೊಂಡು ಭಾರಿ ತೆರಿಗೆ ವಂಚನೆ ಮಾಡಿದ ಆರೋಪಗಳಿವೆ. ಈ ಕುರಿತು ಹಲವು ನೊಟೀಸ್ ಪಡೆದಿರುವ ದೈನಿಕ್ ಭಾಸ್ಕರ್ ಮೇಲೆ ಇದೀಗ ಐಟಿ ಇಲಾಖೆ ದಾಳಿ ಮಾಡಿದೆ. ತೆರಿಗೆ ವಂಚನೆ ಮೂಲಕ ಪಡೆದ ಹಣವನ್ನು ಮಾರಿಷಸ್ ಆಧಾರಿತ ಘಟಕಗಳ ಮೂಲಕ ಷೇರು ಪ್ರೀಮಿಯಂ ಮತ್ತು ವಿದೇಶಿ ಹೂಡಿಕೆಗಳ ರೂಪದಲ್ಲಿ ಬಳಕೆ ಮಾಡಲಾಗಿದೆ. ಇನ್ನು ಪನಾಮಾ ಸೋರಿಕೆ ಪ್ರಕರಣದಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಸಹ ಕಾಣಿಸಿಕೊಂಡಿವೆ. ಈ ಕುರಿತ ಬ್ಯಾಂಕ್ ಮಾಹಿತಿ, ಟ್ರಾನ್ಸಾಕ್ಷನ್,, ಆದಾಯ ಸೇರಿದಂತೆ ಎಲ್ಲಾ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ.
ದೈನಿಕ್ ಬಾಸ್ಕರ್ ಗ್ರೂಪ್ ಮತ್ತು ಅಂಗಸಂಸ್ಥೆ ಕಂಪನಿಗಳು ಸೇರಿದಂತೆ 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಡಿಬಿ ಕಾರ್ಪ್ ಲಿಮಿಟೆಡ್ ಇದು ದಿನಪತ್ರಿಕೆ ದೈನಿಕ್ ಭಾಸ್ಕರ್ ಅನ್ನು ಪ್ರಕಟಿಸುತ್ತದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ವ್ಯವಹಾರವನ್ನು ಮೆ / ಡಿಬಿ ಪವರ್ ಲಿಮಿಟೆಡ್ ಹೆಸರಿನಲ್ಲಿ ನಡೆಸಲಾಗುತ್ತದೆ. ಈ ಸಮೂಹ ಸಂಸ್ಥೆಯನ್ನು ಮೂವರು ಸಹೋದರರಾದ ಸುಧೀರ್ ಅಗರ್ವಾಲ್, ಪವನ್ ಅಗರ್ವಾಲ್ ಮತ್ತು ಗಿರೀಶ್ ಅಗರ್ವಾಲ್ ನಡೆಸುತ್ತಿದ್ದಾರೆ.