ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ
ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಮೊದಲ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
ವರದಿ: ಆನಂದ್ ಬೈದನಮನೆ
ಬೆಂಗಳೂರು (ಜ.1): ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನ ಮೊದಲ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಬೆಂಗಳೂರಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ನೂತನ ವರ್ಷಾರಂಭದ ದಿನವಾದ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್ ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್ ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ” ಎಂದರು.
ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು ಹಂತಹಂತವಾಗಿ ಎಲ್ಲವನ್ನೂ ಬದಲಿಸಲಾಗುವುದು ಎಂದರು.
ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಆರ್ ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ.
ಇದಲ್ಲದೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್ ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ.
ಎಂಎಸ್ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಬೋಟಿಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಇಂತಹ ಬೋಟಿಕ್ ತೆರೆಯಲಿದೆ. ಇವೆಲ್ಲವೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಹಂತಹಂತವಾಗಿ ಆರಂಭವಾಗಲಿವೆ. ಮದ್ಯಪ್ರಿಯರು ಯಾವುದೇ ತೊಂದರೆ ಇಲ್ಲದೆ, ತಮಗೆ ಬೇಕಾದ ದರ್ಜೆಯ ಮದ್ಯದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು.
ಇಂತಹ ಬೋಟಿಕ್ ಗಳಿಂದ ಸಂಸ್ಥೆಯ ವಹಿವಾಟು ಶೇಕಡ 30ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಸಿಗುವ ಬ್ರಾಂಡೆಡ್ ಮದ್ಯದ ಬಗೆಗಳಿಗೆ ಗುಣಮಟ್ಟದ ಖಾತ್ರಿ ಇರಲಿದೆ. ಈ ಮೂಲಕ ಸಂಸ್ಥೆಯು ಹೊಸ ಹೆಜ್ಜೆ ಇಡುತ್ತಿದೆ. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಎಂಎಸ್ ಐ ಎಲ್ ಇಟ್ಟುಕೊಂಡಿದೆ.