Asianet Suvarna News Asianet Suvarna News

ಗೃಹಸಾಲ ಮಾಡಿದೋರಿಗಷ್ಟೇ ಸಿಗುತ್ತೆ ಈ ಲೋನ್? ಹಾಗಾದ್ರೆ ಯಾವುದೀ ಸಾಲ?

ಮನೆ ಕಟ್ಟಲು ಬ್ಯಾಂಕ್‌ನಲ್ಲಿ ಸಾಲ ಮಾಡೋದು ಅನಿವಾರ್ಯ. ಆದ್ರೆ ಸ್ವಲ್ಪ ವರ್ಷಗಳ ಬಳಿಕ ಮತ್ತೆ ಮನೆ ದುರಸ್ತಿಗೆ ಹೊರಟ್ರೆ ಕೈಯಲ್ಲಿ ಕಾಸಿರಲ್ಲ.ಇಂಥ ಸಮಯದಲ್ಲಿ ನಿಮ್ಮ ಕೈಹಿಡಿಯಲಿದೆ ಟಾಪ್‌ಅಪ್‌ ಲೋನ್.

Important things about top-up loans
Author
Bangalore, First Published Aug 26, 2021, 5:20 PM IST
  • Facebook
  • Twitter
  • Whatsapp

ಟಾಪ್‌ ಅಪ್‌ ಸಾಲಗಳ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ನೀವು ಬ್ಯಾಂಕ್‌ನಲ್ಲಿ ಗೃಹ ಸಾಲ ಹೊಂದಿದ್ರೆ ಹಾಗೂ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುತ್ತಿದ್ರೆ, ಪ್ರಸ್ತುತವಿರೋ ಸಾಲದ ಮೊತ್ತವನ್ನು ಹೆಚ್ಚಿಸಲು ಅವಕಾಶವಿದೆ. ಅಂದ್ರೆ ನೀವು ಸಾಲದ ಮೊತ್ತವನ್ನು ಹೆಚ್ಚಿಸಿ ಆ ಹೆಚ್ಚುವರಿ ಹಣವನ್ನು ಪಡೆಯಬಹುದು. ಇದನ್ನೇ ಟಾಪ್‌ ಅಪ್ ಲೋನ್‌ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ನೀವು 10 ವರ್ಷಗಳ ಅವಧಿಗೆ 60 ಲಕ್ಷ ರೂ. ಗೃಹ ಸಾಲವನ್ನು ಬ್ಯಾಂಕ್‌ನಿಂದ ಪಡೆದಿರುತ್ತೀರಿ ಎಂದು ಭಾವಿಸೋಣ. 5 ವರ್ಷಗಳ ಬಳಿಕ ನಿಮ್ಮ ಸಾಲದ ಮೊತ್ತ 36 ಲಕ್ಷಕ್ಕೆ ಇಳಿಕೆಯಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಮನೆ ನವೀಕರಣಕ್ಕೆ ಯೋಚಿಸುತ್ತೀರಿ. ಇಂಥ ಸಮಯದಲ್ಲಿ ನೀವು ಟಾಪ್‌ಅಪ್‌ ಸಾಲವನ್ನು ಪಡೆಯಬಹುದು. ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು ತನ್ನ ನಿಷ್ಠಾವಂತ ಗ್ರಾಹಕರಿಗೆ ಟಾಪ್‌ ಅಪ್‌ ಸಾಲ ನೀಡುತ್ತವೆ.

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡೋದು ಎಷ್ಟು ಸುರಕ್ಷಿತ?

ವಿಶೇಷತೆಗಳೇನು?
-ವಿವಿಧ ಉದ್ದೇಶಗಳಿಗಾಗಿ ನೀವು ಟಾಪ್—ಅಪ್‌ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಸಾಲವನ್ನು ವೈಯಕ್ತಿಕ ಸಾಲವೆಂದು ಪರಿಗಣಿಸಿ ಮನೆ ನವೀಕರಣ, ಅಲಂಕಾರ ಹಾಗೂ ಇತರ ತುರ್ತು ಅವಶ್ಯಕತೆಗಳಿಗೆ ಬಳಸಬಹುದು.
-ಈ ಸಾಲವನ್ನು 10 ವರ್ಷಗಳ ಅವಧಿಗೆ ಅಥವಾ ನಿಮ್ಮ ಗೃಹ ಸಾಲದ ಅವಧಿಯವರೆಗೆ ಪಡೆಯಬಹುದು. ಸಾಲದ ಅವಧಿ ನಿಮ್ಮ ವಯಸ್ಸು, ಆದಾಯ ಹಾಗೂ ಆಸ್ತಿಯ ಮೌಲ್ಯವನ್ನು ಆಧರಿಸಿರುತ್ತದೆ. ಅಲ್ಲದೆ, ಎಷ್ಟು ಅವಧಿಗೆ ಸಾಲ ನೀಡಬೇಕೆಂಬುದು ಆಯಾ ಬ್ಯಾಂಕ್‌ಗೆ ಸಂಬಂಧಿಸಿದ ವಿಷಯವಾಗಿದೆ. 
-ಸಾಲದ ಮೊತ್ತ ಕೂಡ ಬ್ಯಾಂಕ್ನಿಂದ ಬ್ಯಾಂಕ್ಗೆ ಬೇರೆಯಾಗಿರುತ್ತದೆ. ಗೃಹ ಸಾಲದ ಮೊತ್ತ ಹಾಗೂ ಹೊಸ ಟಾಪ್ಅಪ್ ಸಾಲ ಎರಡೂ ಸೇರಿಸಿದ್ರೆ ಆಸ್ತಿ ಮೌಲ್ಯದ  ಶೇ.70-80ರಷ್ಟರೊಳಗೆ ಇರಬೇಕು. ಈ ಮಿತಿಯನ್ನು ಯಾವುದೇ ಕಾರಣಕ್ಕೂ ಮೀರಬಾರದು.
-ಟಾಪ್ ಅಪ್ ಸಾಲಗಳ ಮೇಲೆ ವಿಧಿಸೋ ಬಡ್ಡಿದರ ಗೃಹ ಸಾಲದ ಬಡ್ಡಿದರದಷ್ಟೇ ಇರುತ್ತದೆ. ಆದ್ರೆ ಕೆಲವು ಬ್ಯಾಂಕ್ಗಳು ಮಾತ್ರ ಗೃಹಸಾಲದ ಬಡ್ಡಿದರಕ್ಕಿಂತ ಸ್ವಲ್ಪ ಹೆಚ್ಚಿನ ಬಡ್ಡಿ ವಿಧಿಸುತ್ತವೆ. 

Important things about top-up loans

ಪ್ರಯೋಜನಗಳೇನು?
-ಕ್ರೆಡಿಟ್ ಕಾರ್ಡ್ ಸಾಲ, ವೈಯಕ್ತಿಕ ಸಾಲ ಅಥವಾ ಕಾರ್ ಸಾಲಕ್ಕೆ ಹೋಲಿಸಿದ್ರೆ ಟಾಪ್ ಅಪ್ ಸಾಲಗಳ ಮೇಲಿನ ಬಡ್ಡಿದರ ಕಡಿಮೆ. ಇದೇ ಕಾರಣಕ್ಕೆ ಬಹುತೇಕರು ಟಾಪ್-ಅಪ್ ಸಾಲಗಳನ್ನು ಪಡೆಯಲು ಇಚ್ಛಿಸುತ್ತಾರೆ.
-ವೈಯಕ್ತಿಕ ಸಾಲ, ಚಿನ್ನದ ಮೇಲಿನ ಸಾಲ ಅಥವಾ ಕಾರ್ ಮೇಲಿನ ಸಾಲಕ್ಕೆ ಹೋಲಿಸಿದ್ರೆ ಟಾಪ್-ಅಪ್ ಸಾಲಗಳು ದೀರ್ಘಾವಧಿ ಹೊಂದಿರುತ್ತವೆ. ಹೀಗಾಗಿ ಯಾವುದೇ ಗಡಿಬಿಡಿಯಿಲ್ಲದೆ ನಿಧಾನಕ್ಕೆ ಈ ಸಾಲವನ್ನು ತೀರಿಸಬಹುದು.
-ನೀವು ಬ್ಯಾಂಕಿನ ಪ್ರಾಮಾಣಿಕ ಗ್ರಾಹಕರಾಗಿದ್ದು, ಕಳೆದ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಇಎಂಐಯನ್ನು ಸಮರ್ಪಕವಾಗಿ ಪಾವತಿಸುತ್ತಿದ್ರೆ ನಿಮ್ಮ ಟಾಪ್-ಅಪ್ ಸಾಲದ ಅರ್ಜಿಯನ್ನು ಬ್ಯಾಂಕ್ ಬೇಗ ಕ್ಲಿಯರ್ ಮಾಡುತ್ತದೆ. 
-ಟಾಪ್-ಅಪ್ ಸಾಲವನ್ನು ನೀವು ಮನೆ ದುರಸ್ತಿ, ಮರುನಿರ್ಮಾಣ ಅಥವಾ ಮಕ್ಕಳ ಶಿಕ್ಷಣಕ್ಕೆ ಬಳಸಿದ್ರೆ ತೆರಿಗೆ ವಿನಾಯ್ತಿ ಕೂಡ ಪಡೆಯಲು ಅವಕಾಶವಿದೆ.

ಆನ್‌ಲೈನ್ ಶಾಪಿಂಗ್ ಮಾಡ್ತೀರಾ? ಇನ್ಮುಂದೆ ಈ ಸೌಲಭ್ಯಕ್ಕೆ ಬ್ರೇಕ್!

ಅರ್ಹತೆಗಳೇನು?
-ನೀವು ಈಗಾಗಲೇ ಬ್ಯಾಂಕ್ನಲ್ಲಿ ಗೃಹ ಸಾಲ ಹೊಂದಿರಬೇಕು.
-ನೀವು ಕಳೆದ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಇಎಂಐ ಕಂತನ್ನು ಪ್ರತಿ ತಿಂಗಳು ತಪ್ಪದೇ ಪಾವತಿಸಿರಬೇಕು.
-ನಿಮ್ಮ ಕ್ರೆಡಿಟ್ ರಿಪೋರ್ಟ್ ಉತ್ತಮವಾಗಿರಬೇಕು.

ಯಾವೆಲ್ಲ ದಾಖಲೆಗಳು ಅಗತ್ಯ? 
-ಗುರುತು ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ, ಪಾನ್ ಕಾರ್ಡ್ ಅಥವಾ ಚಾಲನಾ ಪರವಾನಗಿ ಹೊಂದಿರೋದು ಅಗತ್ಯ.
-ವೇತನ ಪಡೆಯುತ್ತಿರೋರು 3 ತಿಂಗಳ ಸ್ಯಾಲರಿ ಸ್ಲಿಪ್ ನೀಡಬೇಕು.
-ವಿಳಾಸ ದೃಢೀಕರಣಕ್ಕೆ ಪಾಸ್ಪೋರ್ಟ್, ವಿದ್ಯುತ್ ಬಿಲ್ ಇತ್ಯಾದಿ ನೀಡಬೇಕು.
-ಆದಾಯದ ಮಾಹಿತಿಗಾಗಿ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.
-ಪಾಸ್ಪೋರ್ಟ್ ಅಳತೆಯ ಫೋಟೋಗಳು.

ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!

ಬಡ್ಡಿ ಎಷ್ಟು?
ನೀವು ಗೃಹ ಸಾಲಕ್ಕೆ ಪಾವತಿಸೋ ಬಡ್ಡಿಗಿಂತ ಟಾಪ್-ಅಪ್ ಸಾಲಗಳ ಮೇಲಿನ ಬಡ್ಡಿ ಸ್ವಲ್ಪ ಹೆಚ್ಚೇ ಇರುತ್ತದೆ. ಆದ್ರೆ ವೈಯಕ್ತಿಕ ಸಾಲದ ಬಡ್ಡಿದರಕ್ಕೆ ಹೋಲಿಸಿದ್ರೆ ಇದು ಕಡಿಮೆ. ಸಾಮಾನ್ಯವಾಗಿ ಟಾಪ್-ಅಪ್ ಸಾಲಗಳ ಮೇಲಿನ ಬಡ್ಡಿದರ ಶೇ.6.9-ಶೇ.11ರಷ್ಟಿದೆ. ಇದು ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಾಗುತ್ತದೆ. 

Follow Us:
Download App:
  • android
  • ios