ಚೀನಾವನ್ನೂ ಮೀರಿ ಭಾರತದ ಆರ್ಥಿಕ ಪ್ರಗತಿ: ಐಎಂಎಫ್!
ಭಾರತದ ಆರ್ಥಿಕ ಪ್ರಗತಿ ಶೇ.12.5ಕ್ಕೆ ನೆಗೆತ| ಕೊರೋನಾ ನಂತರ ಇಷ್ಟುಪ್ರಗತಿ ಕಾಣಲಿರುವ ಏಕೈಕ ಆರ್ಥಿಕತೆ| ಚೀನಾವನ್ನೂ ಮೀರಿಸಲಿರುವ ಭಾರತ: ಐಎಂಎಫ್
ವಾಷಿಂಗ್ಟನ್(ಏ.07): ಈ ವರ್ಷ ಭಾರತ ಶೇ.12.5ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ. ಭಾರತದ ಆರ್ಥಿಕ ಪ್ರಗತಿ ಚೀನಾಗಿಂತ ಶಕ್ತಿಶಾಲಿಯಾಗಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ. ಅಲ್ಲದೆ, ಕೋವಿಡ್-19 ಸೃಷ್ಟಿಸಿದ ಆರ್ಥಿಕ ಅನಾಹುತದ ಬಳಿಕ ಪ್ರಗತಿ ದಾಖಲಿಸಲಿರುವ ಏಕೈಕ ದೊಡ್ಡ ಆರ್ಥಿಕತೆಯು ಭಾರತದ್ದಾಗಿರಲಿದೆ ಎಂದೂ ಅದು ಹೇಳಿದೆ.
2020ರಲ್ಲಿ ಕೊರೋನಾ ಕಾರಣ ಭಾರತದ ಆರ್ಥಿಕ ಪ್ರಗತಿ ಶೇ.8ರಷ್ಟುದಾಖಲೆಯ ಪ್ರಮಾಣಕ್ಕೆ ಕುಗ್ಗಿತ್ತು. ಆದರೆ 2021ರಲ್ಲಿ ಶೇ.12.5 ಹಾಗೂ 2022ರಲ್ಲಿ ಶೇ.6.9ರ ದರದಲ್ಲಿ ದೇಶವು ಆರ್ಥಿಕ ಪ್ರಗತಿ ಕಾಣಲಿದೆ ಎಂದು ತನ್ನ ‘ವಾರ್ಷಿಕ ಆರ್ಥಿಕ ಮುನ್ನೋಟ’ ವರದಿಯಲ್ಲಿ ಐಎಂಎಫ್ ಮಂಗಳವಾರ ನುಡಿದಿದೆ.
ಆದರೆ ಭಾರತದ ಪ್ರಗತಿಗಿಂತ ಚೀನಾ ಪ್ರಗತಿ ಮಂದವಾಗಿರಲಿದೆ. ಚೀನಾ 2021ರಲ್ಲಿ ಶೇ.8.6ರ ದರದಲ್ಲಿ ಹಾಗೂ 2022ರಲ್ಲಿ ಶೇ.5.6ರ ದರದಲ್ಲಿ ಪ್ರಗತಿ ದಾಖಲಿಸಲಿದೆ ಎಂದು ಅದು ಹೇಳಿದೆ. ಕೊರೋನಾ ಹೊಡೆತದ ನಡುವೆಯೂ, ವಿಶ್ವಕ್ಕೇ ಕೊರೋನಾ ಹಂಚಿದ ಆರೋಪ ಹೊತ್ತಿರುವ ಚೀನಾ 2020ರಲ್ಲಿ ಶೇ.2.3ರ ಆರ್ಥಿಕ ಪ್ರಗತಿ ಕಂಡಿತ್ತು. ಧನಾತ್ಮಕ ಪ್ರಗತಿ ಕಂಡ ವಿಶ್ವದ ಏಕೈಕ ಆರ್ಥಿಕತೆ ಎಂಬ ಖ್ಯಾತಿಗೆ ಭಾಜನವಾಗಿತ್ತು.
ಇದೇ ವೇಳೆ, 2020ರಲ್ಲಿ ಶೇ.3ರಷ್ಟುಕುಗ್ಗಿದ್ದ ಜಾಗತಿಕ ಆರ್ಥಿಕತೆ 2021ರಲ್ಲಿ ಶೇ.6ರಷ್ಟುಹಾಗೂ 2022ರಲ್ಲಿ ಶೇ.4.4ರಷ್ಟುಪ್ರಗತಿ ಕಾಣಲಿದೆ ಎಂದು ಐಎಂಎಫ್ ನುಡಿದಿದೆ.