ಅಮೆರಿಕದಲ್ಲಿನ ಉದ್ಯೋಗಕ್ಕೆ ಗುಡ್ ಬೈ ಹೇಳಿದ ಐಐಟಿ ಪದವೀಧರೆ ಈಗ 100 ಕೋಟಿ ಮೌಲ್ಯದ ಕಂಪನಿ ಒಡತಿ!
ಅಹನಾ ಗೌತಮ್ ಐಐಟಿ, ಹಾರ್ವರ್ಡ್ ನಲ್ಲಿ ಓದಿ ಉತ್ತಮ ಉದ್ಯೋಗದಲ್ಲಿದ್ದರೂ ಸ್ವಂತ ಉದ್ಯಮ ಸ್ಥಾಪಿಸುವ ಕನಸಿನಿಂದ ಅದಕ್ಕೆ ರಾಜೀನಾಮೆ ನೀಡಿದರು. ಅವರ 'ಒಪನ್ ಸೀಕ್ರೆಟ್' ಎಂಬ ಆರೋಗ್ಯಕರ ತಿನಿಸುಗಳ ಸ್ಟಾರ್ಟ್ ಅಪ್ ಮೌಲ್ಯ ಈಗ 100 ಕೋಟಿ ರೂ.
Business Desk: ಐಐಟಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯೋದು ಅನೇಕರ ಕನಸು. ಈ ಕನಸನ್ನು ನನಸು ಮಾಡಿಕೊಳ್ಳೋದು ಅಷ್ಟು ಸುಲಭದ ಕೆಲಸ ಕೂಡ ಅಲ್ಲ. ಇನ್ನು ಈ ಸಂಸ್ಥೆಗಳಲ್ಲಿ ಶಿಕ್ಷಣ ಮುಗಿಸಿದ್ರೆ ಕೈತುಂಬಾ ವೇತನ ನೀಡುವ ಉದ್ಯೋಗ ದೊರೆತು ಜೀವನದಲ್ಲಿ ನೆಲೆ ಕಾಣಬಹುದು ಎಂಬುದು ಅನೇಕರ ಲೆಕ್ಕಾಚಾರ. ಆದರೆ, ಐಐಟಿ-ಹಾರ್ವರ್ಡ್ ನಲ್ಲಿ ಓದಿದ್ರೂ ಅಧಿಕ ವೇತನದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ಯಮ ಸ್ಥಾಪನೆಗೆ ಮುಂದಾದವರು ಅಹನಾ ಗೌತಮ್. 30ನೇ ವಯಸ್ಸಿನಲ್ಲಿ ಅಧಿಕ ವೇತನದ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪಿಸುವ ನಿರ್ಧಾರ ಕೈಗೊಂಡ ಅಹನಾ ಗೌತಮ್, ಆರೋಗ್ಯಕರ ತಿನಿಸುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಉದ್ಯಮ ಪ್ರಾರಂಭಿಸಿದರು. 'ಒಪನ್ ಸೀಕ್ರೆಟ್' ಎಂಬ ಆರೋಗ್ಯಕರ ತಿನಿಸುಗಳನ್ನು ಸಿದ್ಧಪಡಿಸುವ ಸ್ಟಾರ್ಟ್ ಅಪ್ ತೆರೆಯೋದು ಅಹನಾ ಪಾಲಿಗೆ ಅಪಾಯದ ನಿರ್ಧಾರವೇ ಆಗಿತ್ತು. ಅದರಿಂದ ಮುಂದೆ ಎದುರಾಗಬಹುದಾದ ಎಲ್ಲ ಆರ್ಥಿಕ ಸವಾಲುಗಳನ್ನು ಎದುರಿಸಲು ಅವರು ಸಿದ್ಧರಿರಬೇಕಿತ್ತು. ಆದರೆ, ಆಕೆಯ ಮೇಲೆ ತಾಯಿಗೆ ಅಪಾರ ನಂಬಿಕೆಯಿತ್ತು. ಇದೇ ಅಹನಾ ಅವರಿಗೆ ಉದ್ಯಮ ಪ್ರಾರಂಭಕ್ಕೆ ಧೈರ್ಯ ನೀಡಿತು. ಇವರ ಕಂಪನಿ ಪ್ರಸ್ತುತ 100 ಕೋಟಿ ರೂ. ವಹಿವಾಟು ನಡೆಸುತ್ತಿದೆ.
ಉದ್ಯಮಕ್ಕಾಗಿ ಉದ್ಯೋಗಕ್ಕೆ ಗುಡ್ ಬೈ
ಐಐಟಿ ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ಅಹನಾ ಗೌತಮ್, ಹಾರ್ವರ್ಡ್ ಬ್ಯುಸಿನಸ್ ಸ್ಕೂಲ್ ನಲ್ಲಿ ಎಂಬಿಎ ಪದವಿ ಪಡೆದಿದ್ದರು. ಆ ಬಳಿಕ ಅಹನಾ ಪ್ರೊಕಟರ್ ಆಂಡ್ ಗ್ಯಾಂಬಲ್ (P&G) ಕಂಪನಿಯಲ್ಲಿ ವೃತ್ತಿ ಆರಂಭಿಸಿದರು. ಆ ಬಳಿಕ ಅವರು ಜನರಲ್ ಮಿಲ್ಸ್ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ.
Nadia Chauhan: ಅಪ್ಪನ ಕೈ ಹಿಡಿದ ಮಗಳು; ಬುದ್ಧಿವಂತಿಕೆಯಿಂದ್ಲೇ ಲಕ್ಷ ಕೋಟಿ ವ್ಯವಹಾರ ನಡೆಸ್ತಿದೆ ಕಂಪನಿ
ಒಪನ್ ಸೀಕ್ರೆಟ್ ಸ್ಥಾಪನೆಗೇನು ಕಾರಣ?
ಅಹನಾ ಗೌತಮ್ ಅಮೆರಿಕದಲ್ಲಿರುವ ಸಮಯದಲ್ಲಿ ಒಮ್ಮೆ ರಾಜಸ್ಥಾನದ ಜನಪ್ರಿಯ ತಿನಿಸು 'ಗುಜ್ಜಿಯಾ' ತಿನ್ನಲ್ಲು ಅಲ್ಲಿನ ಫುಡ್ ಸ್ಟೋರ್ ಒಂದಕ್ಕೆ ಹೋಗಿದ್ದರು. ಆದರೆ, ಅಲ್ಲಿ ಆ ತಿನಿಸು ಅವರಿಗೆ ಸಿಗಲಿಲ್ಲ. ಏಕೆಂದ್ರೆ ಅಲ್ಲಿ ಅವರು ಯಾವುದೇ ಜಂಕ್ ಫುಡ್ ಗಳನ್ನು ಇಡೋದಿಲ್ಲ. ಆದರೆ, ಭಾರತದಲ್ಲಿ ಇಂಥ ವ್ಯವಸ್ಥೆ ಇಲ್ಲ. ಹೀಗಿರುವಾಗ ಭಾರತೀಯ ತಿನಿಸುಗಳನ್ನು ಆರೋಗ್ಯಕರವಾಗಿಸುವ ಯೋಚನೆ ಅಹನಾಗೆ ಹೊಳೆಯಿತು. ಇದೇ 'ಒಪನ್ ಸೀಕ್ರೆಟ್' ಸ್ಥಾಪನೆಗೆ ಕಾರಣವಾಯಿತು.
ಉದ್ಯಮಕ್ಕೆ ತಾಯಿ ಹಣ
ಅಹನಾ ಅವರನ್ನು ತಾಯಿ ಏಕಾಂಗಿಯಾಗಿ ಬೆಳೆಸಿದ್ದರು. ಅವರ ಪ್ರತಿ ಯಶಸ್ಸಿನಲ್ಲೂ ತಾಯಿ ಮಹತ್ವದ ಪಾತ್ರ ವಹಿಸಿದ್ದರು. ಶಿಕ್ಷಣದಿಂದ ಹಿಡಿದು ಉದ್ಯಮ ಪ್ರಾರಂಭದ ತನಕ ಪ್ರತಿ ವಿಚಾರದಲ್ಲೂ ತಾಯಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಹೀಗಾಗಿಯೇ ಅಹನಾಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಐಐಟಿ, ಹಾರ್ವರ್ಡ್ ಯುನಿವರ್ಸಿಟಿಯಂತಹ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಯಿತು. ಇನ್ನು ಅಹನಾ ತಾಯಿ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. 'ಒಮ್ಮೆ ನೀವು ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದಿದರೆ, ನೀನು ನಿಮ್ಮ ಜೀವನದಲ್ಲಿ ಸ್ವಾತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ' ಎಂದು ಅಹನಾ ತಾಯಿ ಸದಾ ಹೇಳುತ್ತಿದ್ದರು. 2019ರ ಮಾರ್ಚ್ ನಲ್ಲಿ ಅಹನಾ ಸ್ಟಾರ್ಟ್ ಅಪ್ ಪ್ರಾರಂಭಿಸಿದಾಗ ಅವರ ತಾಯಿ ಅದಕ್ಕೆ ಹಣ ನೀಡಿದ್ದರು. ಅಲ್ಲದೆ, ಕೆಲವರು ಕಂಪನಿ ಪ್ರಾರಂಭಿಸುವ ಮುನ್ನ ಮದುವೆಯಾಗುವಂತೆ ಅಹನಾಗೆ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಕೂಡ ಅವರ ತಾಯಿ ನಿನ್ನ ಕನಸು ಬೆನ್ನತ್ತಿ ಹೋಗು ಎಂದು ಹೇಳುವ ಮೂಲಕ ಉತ್ತೇಜನ ನೀಡಿದ್ದರು ಎಂಬುದನ್ನು ಅಹನಾ ನೆನಪಿಸಿಕೊಳ್ಳುತ್ತಾರೆ.