Interest Rate Hike:ರೆಪೋ ದರ ಏರಿಕೆ ಬೆನ್ನಲ್ಲೇ ಗೃಹಸಾಲದ ಬಡ್ಡಿದರ ಹೆಚ್ಚಿಸಿವೆ ಈ 4 ಬ್ಯಾಂಕುಗಳು; ಹೊಸ ದರದ ಮಾಹಿತಿ ಇಲ್ಲಿದೆ

*ಗೃಹಸಾಲದ ಬಡ್ಡಿದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಿಎನ್ ಬಿ
*ನಿನ್ನೆಯಷ್ಟೇ ರೆಪೋ ದರ ಏರಿಕೆ ಮಾಡಿದ್ದ ಆರ್ ಬಿಐ
*ಗೃಹ ಸಾಲದ ಇಎಂಐ ಮೊತ್ತದಲ್ಲಿ ಏರಿಕೆ

ICICI Bank Bank of Baroda Bank of India PNB hike home loan interest rates Check latest rates here

ನವದೆಹಲಿ( ಜೂ.9): ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗೆ ಹೆಚ್ಚಿಸಿದ ಕೇವಲ ಒಂದು ದಿನದಲ್ಲೇ ಅನೇಕ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿರೋದಾಗಿ ಘೋಷಿಸಿವೆ. 36 ದಿನಗಳ ಅವಧಿಯಲ್ಲಿ ಆರ್ ಬಿಐ ರೆಪೋ ದರ ಏರಿಕೆ ಮಾಡುತ್ತಿರೋದು ಇದು ಎರಡನೇ ಬಾರಿಯಾಗಿದೆ. ಕೆಲವೇ ದಿನಗಳ ಹಿಂದೆ ಅನೇಕ ಬ್ಯಾಂಕುಗಳು ಗೃಹಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದ್ದು, ಈಗ ಮತ್ತೊಮ್ಮೆ ಏರಿಕೆ ಮಾಡಿವೆ. ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಿಎನ್ ಬಿ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದ್ದು, ಅದರ ವಿವರ ಇಲ್ಲಿದೆ.

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ಬಾಹ್ಯ ಬೆಂಚ್ ಮಾರ್ಕ್ ಲೆಂಡಿಂಗ್ ದರವನ್ನು (EBLR) 2022ರ ಜೂನ್ 8ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿವೆ. ಆರ್ ಬಿಐ ರೆಪೋ ದರವನ್ನು ಜೂ.8ರಿಂದ ಶೇ.4.90ಕ್ಕೆ ಏರಿಕೆ ಮಾಡಿದೆ.  ಈ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿರುವ ಐಸಿಐಸಿಐ ಬ್ಯಾಂಕ್ 'ಆರ್ ಬಿಐ ಪಾಲಿಸಿ ರೆಪೋ ದರವನ್ನು ಪರಿಗಣಿಸಿ 2022ರ ಜೂನ್ 8ರಿಂದ ಜಾರಿಗೆ ಬರುವಂತೆ ಐಸಿಐಸಿಐ ಬ್ಯಾಂಕ್ ಬಾಹ್ಯ ಬೆಂಚ್ ಮಾರ್ಕ್ ಸಾಲದ ದರವನ್ನು  (I-EBLR) ವಾರ್ಷಿಕ ಶೇ.8.60ಕ್ಕೆ ಹೆಚ್ಚಳ ಮಾಡಿದೆ.' ಕಳೆದ ತಿಂಗಳಷ್ಟೇ ಐಸಿಐಸಿಐ ಬ್ಯಾಂಕ್ ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ರೇಟ್ (EBLR) ಅನ್ನು ಶೇ.8.10ಕ್ಕೆ ಏರಿಕೆ ಮಾಡಿತ್ತು.

Loan EMIs Hike: ಸಾಲದ ಬಡ್ಡಿದರ, ಇಎಂಐ, ಎಫ್ ಡಿ ಮೇಲೆ ರೆಪೋ ದರ ಏರಿಕೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ

ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಬರೋಡ (Bank of Baroda) ರೆಪೋ ದರಕ್ಕೆ ಲಿಂಕ್ ಆಗಿರುವ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ( BRLLR) ಜೂ.9ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿದೆ. ಚಿಲ್ಲರೆ ಸಾಲಗಳಿಗೆ  ಶೇ.7.40 BRLLR ನಿಗದಿಪಡಿಸಲಾಗಿದೆ. ಕಳೆದ ತಿಂಗಳು ಕೂಡ ಬ್ಯಾಂಕ್ ಆಫ್ ಬರೋಡ ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡಿತ್ತು. ಮೇ 5ರಿಂದಲೇ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡಾ ಕೂಡ ರೆಪೋ ಆಧಾರಿತ ಸಾಲದ ದರವನ್ನು 40 ಬಿಪಿಎಸ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.6.90 ಕ್ಕೆ ಹೆಚ್ಚಿಸಿತ್ತು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ರೆಪೋ ಆಧಾರಿತ ಸಾಲದ ದರವನ್ನು (RLLR) ಶೇ.7.40ಕ್ಕೆ ಹೆಚ್ಚಳ ಮಾಡಿದೆ. 

ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾ (Bank ofIndia) ಕೂಡ ರೆಪೋ ದರವನ್ನು ಪರಿಷ್ಕರಿಸಿದೆ. ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಜೂ.8ರಿಂದಲೇ ಜಾರಿಗೆ ಬರುವಂತೆ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಾಗಿದೆ. 

ಇಎಂಐ ಹೆಚ್ಚಳ
ಈ ಎಲ್ಲ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿ ಹೆಚ್ಚಳ ಮಾಡಿರುವುದರಿಂದ ಇಎಂಐಯಲ್ಲಿ ಹೆಚ್ಚಳವಾಗಲಿದೆ. ಇತರ ಬ್ಯಾಂಕುಗಳು ಕೂಡ ಸದ್ಯದಲ್ಲೇ ಗೃಹ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಬಡ್ಡಿದರ ಹೆಚ್ಚಳ ಮಾಡುವುದು ಬ್ಯಾಂಕುಗಳಿಗೆ ಅನಿವಾರ್ಯವಾಗಿದೆ. 
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು  ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿ (MPC) ಜೂ.8ರಂದು ರೆಪೋ ದರವನ್ನು  ಶೇ.4.40ರಿಂದ ಶೇ.4.90ಕ್ಕೆ ಏರಿಕೆ ಮಾಡಿದೆ.

ಶೀಘ್ರದಲ್ಲಿ ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್; ಮಾಹಿತಿ ನೀಡಿದ RBI ಗವರ್ನರ್ 

ರೆಪೋ ದರ ಅಂದ್ರೇನು? 
ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ.ರೆಪೋ ದರ  ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. 
 

Latest Videos
Follow Us:
Download App:
  • android
  • ios