Asianet Suvarna News Asianet Suvarna News

ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ರಾಧಾ ವೆಂಬು; ಉದ್ಯಮ ಜಗತ್ತಿನಲ್ಲಿ ಇವರ ಸಾಧನೆ ಹಲವರಿಗೆ ಪ್ರೇರಣೆ

ಹುರೂನ್ ಇಂಡಿಯಾ 2023ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಝುಹೋ ಕಾರ್ಪ್ ಸಹಸಂಸ್ಥಾಪಕಿ ರಾಧಾ ವೆಂಬು ದೇಶದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದಾರೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ವೆಂಬು ಈ ವರ್ಷ ಮೊದಲ ಸ್ಥಾನಕ್ಕೇರಿದ್ದಾರೆ. ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರನ್ನು ಹಿಂದಿಕ್ಕಿ ವೆಂಬು ಈ ಸ್ಥಾನಕ್ಕೇರಿದ್ದಾರೆ.
 

Hurun India Rich List 2023 Radha Vembu is richest self made Indian woman a look at her inspiring journey anu
Author
First Published Oct 11, 2023, 11:43 AM IST

Business Desk:ಹುರೂನ್ ಇಂಡಿಯಾದ 2023ನೇ ಸಾಲಿನ ವರದಿಯಲ್ಲಿ ಝುಹೋ ಕಾರ್ಪ್ ಸಹಸಂಸ್ಥಾಪಕಿ ರಾಧಾ ವೆಂಬು ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದಾರೆ. 36,000 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ 50 ವರ್ಷದ ವೆಂಬು ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೇರಿದ್ದಾರೆ. ಭಾರತದ 100 ಶ್ರೀಮಂತ ವ್ಯಕ್ತಿಗಳಲ್ಲಿ ರಾಧಾ ವೆಂಬು 40ನೇ ಸ್ಥಾನ ಗಳಿಸಿದ್ದಾರೆ. ಇನ್ನು 22,500 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ ಫಾಲ್ಗುಣಿ ನಾಯರ್ 86ನೇ ಸ್ಥಾನದಲ್ಲಿದ್ದಾರೆ. ಕಳೆದ ಸಾಲಿನ ಹುರೂನ್ ಇಂಡಿಯಾದ ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯಲ್ಲಿ ವೆಂಬು ಎರಡನೇ ಸ್ಥಾನದಲ್ಲಿದ್ದರು. ಇನ್ನು ಭಾರತದ ಟಾಪ್ 5 ಸಾಫ್ಟ್ ವೇರ್ ಉದ್ಯಮಿಗಳಲ್ಲಿ ವೆಂಬು ಮೂರನೇ ಸ್ಥಾನದಲ್ಲಿದ್ದಾರೆ. ಎಚ್ ಸಿಎಲ್ ಮುಖ್ಯಸ್ಥ ಶಿವ್ ನಡಾರ್ ಹಾಗೂ ಕುಟುಂಬ ಮೊದಲ ಸ್ಥಾನದಲ್ಲಿದೆ. ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಧಾ ವೆಂಬು ಅವರ ಸಾಧನೆ ನಿಜಕ್ಕೂ ಅನೇಕ ಮಹಿಳೆಯರಿಗೆ ಸ್ಫೂರ್ತಿದಾಯಕ.

ರಾಧಾ ವೆಂಬು ಝುಹೋ ಕಾರ್ಪೋರೇಷನ್ ಸಹ ಸಂಸ್ಥಾಪಕಿ. ಇವರ ಸಹೋದರ ಶ್ರೀಧರ್ ವೆಂಬು ಈ ಕಂಪನಿಯ ಸಿಇಒ. ರಾಧಾ ವೆಂಬು ಸಹೋದರನಿಗೆ ಈ ಕಂಪನಿಯನ್ನು ಕಟ್ಟಿ ಬೆಳೆಸುವಲ್ಲಿ ಬೆಂಗಾವಲಾಗಿ ನಿಂತಿದ್ದಾರೆ. ತನ್ನ ಸಹೋದರರಾದ ಶ್ರೀಧರ್ ವೆಂಬು ಹಾಗೂ ಶೇಖರ್ ವೆಂಬು ಜೊತೆಗೆ ಸಾಫ್ಟ್ ವೇರ್ ಅಭಿವೃದ್ಧಿ ಕಂಪನಿ ಝುಹೋ ಕಾರ್ಪ್ ಅನ್ನು ರಾಧಾ ವೆಂಬು 1996ರಲ್ಲಿ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಈ ಕಂಪನಿಗೆ ಅಡ್ವೆನೆಟ್ ಎಂಬ ಹೆಸರಿತ್ತು. ಆದರೆ, ಆ ಬಳಿಕ ಝುಹೋ ಕಾರ್ಪೋರೇಷನ್ ಎಂದು ಬದಲಾಯಿಸಲಾಯಿತು.

ತಾಯಿ ಕನಸಿಗೆ ಮಗಳ ಬೆಂಬಲ; ಇಬ್ಬರೂ ಜೊತೆಯಾಗಿ ಕಟ್ಟಿದ ಕಂಪನಿ ಆದಾಯ ಇಂದು 5000 ಕೋಟಿ ರೂ.!

ರಾಧಾ ವೆಂಬು ಜಾನಕಿ ಹೈ ಟೆಕ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಎಂಬ ಕೃಷಿ ಎನ್ ಜಿಒ ನಿರ್ದೇಶಕಿ ಕೂಡ ಹೌದು. ಹಾಗೆಯೇ ಹೈಲ್ಯಾಂಡ್ ವ್ಯಾಲಿ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನು ಕೂಡ ಹೊಂದಿದ್ದಾರೆ. 

1972ರಲ್ಲಿ ಚೆನ್ನೈನಲ್ಲಿ ಜನಿಸಿದ ರಾಧಾ ವೆಂಬು, ಚೆನ್ನೈ ನ್ಯಾಷನಲ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಆ ಬಳಿಕ ಮದ್ರಾಸ್ ಐಐಟಿಯಿಂದ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪೂರ್ಣಗೊಳಿಸಿದರು. ರಾಧಾ ಅವರ ತಂದೆ ಶಂಭುಮೂರ್ತಿ ಮದ್ರಾಸ್ ಹೈ ಕೋರ್ಟ್ ನಲ್ಲಿ ಬೆರಳಚ್ಚುಗಾರರಾಗಿದ್ದರು. 

ರಾಧಾ ಎಂಬು ಅವರ ನಿವ್ವಳ ಆದಾಯ ಸುಮಾರು 19,000 ಕೋಟಿ ರೂ. ಇದೆ. ಝುಹೋ ಕಾರ್ಪ್ ನಲ್ಲಿ ಶೇ.47.8ರಷ್ಟು ಷೇರುಗಳನ್ನು ರಾಧಾ ವೆಂಬು ಹೊಂದಿದ್ದಾರೆ. ಇನ್ನು ಈ ಕಂಪನಿಯಲ್ಲಿ ಅವರ ಸಹೋದರ ಶ್ರೀಧರ್ ವೆಂಬು ಕೇವಲ ಶೇ.5ರಷ್ಟು ಷೇರು ಹೊಂದಿದ್ದಾರೆ. ಇನ್ನೊಬ್ಬ ಸಹೋದರ ಶೇಖರ್ ಕೂಡ ಈ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಝುಹೋ ಕಾರ್ಪ್ ಮೈಕ್ರೋಸಾಫ್ಟ್, ಒರಾಕಲ್, ಸೇಲ್ಸ್ ಫೋರ್ಸ್ ಹಾಗೂ ಇತರ ದೊಡ್ಡ ಕಂಪನಿಗಳ ಜೊತೆಗೆ ಸ್ಪರ್ಧೆ ನಡೆಸುತ್ತಿದೆ. 

ಇಶಾ ಅಂಬಾನಿ ಅತ್ತಿಗೆ ಬ್ರಿಲಿಯೆಂಟ್ ಮಹಿಳಾ ಉದ್ಯಮಿ, ಆಸ್ತಿಯಲ್ಲಿ ಅಪ್ಪನನ್ನೇ ಮೀರಿಸುವಂತಿದ್ದಾಳೆ ಮಗಳು!

ಬೆರಳೆಣಿಕೆಯಷ್ಟು ಇಂಜಿನಿಯರ್ ಗಳ ತಂಡದೊಂದಿಗೆ ಪ್ರಾರಂಭಗೊಂಡ ಝುಹೋ ಕಾರ್ಪ್ ನಲ್ಲಿ ಇಂದು 16,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇನ್ನು ಈ ಕಂಪನಿ ಭಾರತದಲ್ಲಿ ಮಾತ್ರವಲ್ಲ, ಯುಎಸ್, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದೆ. ಈ ಕಂಪನಿಯ ಕೇಂದ್ರ ಕಚೇರಿ ಚೆನ್ನೈನಲ್ಲಿದೆ. ಭಾರೀ ಪೈಪೋಟಿಯಿರುವ ಉದ್ಯಮ ಜಗತ್ತಿನಲ್ಲಿ ಸಾಫ್ಟ್ ವೇರ್ ಕಂಪನಿಯೊಂದನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ರಾಧಾ ವೆಂಬು ಗಮನ ಸೆಳೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಕಂಪನಿ ಅಭಿವೃದ್ಧಿ ದಾಖಲಿಸುತ್ತಿರುವ ಜೊತೆಗೆ ಅವರ ಆದಾಯದಲ್ಲಿ ಕೂಡ ಹೆಚ್ಚಳವಾಗುತ್ತಿದೆ. 


 

Follow Us:
Download App:
  • android
  • ios