ಶುದ್ಧ ತೈಲ ನಿಮ್ಮ ಹಕ್ಕು: ಫ್ರಾಡ್ ಪತ್ತೆ ವಿಧಾನ ಹೇಗೆ?

How to save yourself from getting conned at petrol pumps
Highlights

ಶುದ್ಧ ತೈಲ ಪ್ರತೀ ಗ್ರಾಹಕನ ಹಕ್ಕು

ಕಲಬೆರಕೆ ತೈಲ ಪತ್ತೆ ಹಚ್ಚುವುದು ಹೇಗೆ?

ತೈಲ ಪ್ರಮಾಣ ವ್ಯತ್ಯಾಸಕ್ಕೆ ಮಂಗಳ ಹಾಡಿ

ಫಿಲ್ಟರ್ ಪೇಪರ್ ಮೂಲಕ ತೈಲ ಗುಣಮಟ್ಟ ಪರೀಕ್ಷೆ

ನವದೆಹಲಿ(ಜು.8): ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿನ ನಿತ್ಯದ ವ್ಯತ್ಯಾಸ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿರುವುದರಲ್ಲಿ ಸಂಶಯವಿಲ್ಲ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಹಾವು ಏಣಿ ಆಟದಿಂದ ಜನಸಾಮಾನ್ಯ ಗಲಿಬಿಲಿಯಲ್ಲಿದ್ದಾನೆ.

ಕೇಂದ್ರ ಸರ್ಕಾರವೂ ಕೂಡ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಸ್ಥಿತ್ಯಂತರಕ್ಕೆ ಎದುರು ನೋಡುತ್ತಿದೆ. ದಿನ ನಿತ್ಯದ ತೈಲ ಬೆಲೆ ಪರಿಷ್ಕರಣೆ ಬವಣೆಯಿಂದ ಅದೂ ಕೂಡ ಹೈರಾಣಾಗಿದೆ. ಈ ಮಧ್ಯೆ ದೇಶದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ತೈಲ ಮೋಸ ಮುಂದುವರೆದಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ದೇಶದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ನಿಗದಿತ ಬೆಲೆಗೆ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟವಾಗುತ್ತಿದ್ದರೂ, ತೈಲ ಪ್ರಮಾಣದಲ್ಲಿ ಭಾರೀ ಪ್ರಮಾಣದ ಮೋಸ ಮುಂದುವರೆದಿದೆ. ಅಲ್ಲದೇ ಕಲಬೆರಕೆಯ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟ ಕೂಡ ತಲೆನೋವಾಗಿ ಪರಿಣಮಿಸಿದೆ.

ಉತ್ತರಪ್ರದೇಶ ರಾಜ್ಯ ಕಲಬೆರಕೆ ತೈಲ ಮತ್ತು ಪ್ರಮಾಣದಲ್ಲಿ ವ್ಯತ್ಯಾಸದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಏಪ್ರಿಲ್ 2014 ರಿಂದ ಸಿಸೆಂಬರ್ 2017 ರ ವರೆಗೆ ರಾಜ್ಯದಲ್ಲಿ ಒಟ್ಟು 1,560 ಇಂತಹ ಪ್ರಕರರಣ ಬೆಳಕಿಗೆ ಬಂದಿವೆ.  ನಂತರದ ಸ್ಥಾನ ಮಹಾರಾಷ್ಟ್ರ ರಾಜ್ಯದಾಗಿದ್ದು, 913 ಪ್ರಕರಣಗಳು ದಾಖಲಾಗಿವೆ. ಇನ್ನು ಮೂರನೇ ಸ್ಥಾನ ದೆಹಲಿ ಪಾಲಾಗಿದ್ದು, ಇಲ್ಲಿ 785 ಪ್ರಕರಣಗಳು ಬೆಳಕಿಗೆ ಬಂದಿವೆ.

ಕಲಬೆರಕೆ ತೈಲ ಮತ್ತು ಪ್ರಮಾಣದಲ್ಲಿನ ವ್ಯತ್ಯಾಸ ತಡೆಗಟ್ಟಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಮೋಸವನ್ನು ಪತ್ತೆ ಹಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಅಲ್ಲದೇ ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುವ ಮೋಸವನ್ನು ಗ್ರಾಹಕರು ಪತ್ತೆ ಹಚ್ಚಲು ಅನುವು ಮಾಡಿಕೊಡಲಾಗಿದೆ.

1. ಫಿಲ್ಟರ್ ಪೇಪರ್ ಪರೀಕ್ಷೆ: ಪೆಟ್ರೋಲ್ ಮತ್ತು ಡಿಸೇಲ್ ಗುಣಮಟ್ಟ ತಿಳಿಯಲು ಫಿಲ್ಟರ್ ಪೇಪರ್ ಪರೀಕ್ಷೆ ಸಹಾಯಕಾರಿ. ಬಿಳಿ ಬಣ್ಣದ ಫಿಲ್ಟರ್ ಪೇಪರ್ ಮೇಲೆ ತೈಲದ ಹನಿ ಹಾಕಿದಾಗ, ಯಾವುದೇ ಕಲೆ ಕಂಡುಬರದೇ ಇದ್ದರೆ ಅದು ಕಲಬೆರಕೆ ತೈಲ ಅಲ್ಲ ಎಂಬುದು ಸ್ಪಷ್ಟ.

2. ಮಷಿನ್ ಕಾರ್ಯ ನಿರ್ವಹಣೆ ಮೇಲೆ ಗಮನ: ಪೆಟ್ರೋಲ್ ತುಂಬಿಸುವ ಮೊದಲು ಮಷಿನ್ ನ ಕಾರ್ಯವೈಖರಿ ಕುರಿತು ತಿಳಿದುಕೊಳ್ಳುವುದು ಅವಶ್ಯಕ. ಅದರಲ್ಲೂ ಪೆಟ್ರೋಲ್ ತುಂಬಿಸುವುದಕ್ಕೂ ಮೊದಲು ಮಷಿನ್ ಜಿರೋ ಇರುವುದನ್ನು ಖಾತರಿಪಡಿಸಿಕೊಳ್ಳುವುದು ಸೂಕ್ತ.

3. 5 ಲೀಟರ್ ಪ್ರಮಾಣದ ಪರೀಕ್ಷೆ: ನೀವು ಎಷ್ಟೇ ಪ್ರಮಾಣದ ಪೆಟ್ರೋಲ್ ಅಥವಾ ಡಿಸೇಲ್ ತುಂಬಿಸಿದರೂ, ಬಂಕ್ ಗಳಲ್ಲಿ 5 ಲೀಟರ್ ಪರೀಕ್ಷೆ ಮಾಡಿಸುವುದು ಸೂಕ್ತ. ಕಾರಣ ೫ ಲೀಟರ್ ಕ್ಯಾನ್ ನಲ್ಲಿ ನಿರ್ದಿಷ್ಟ ಪ್ರಮಾಣ ಖಚಿತವಾಗಿ ಗೊತ್ತಾಗುತ್ತದೆ.

4. ಪ್ರತೀ ಪೆಟ್ರೋಲ್ ಬಂಕ್‌ಗಳಲ್ಲೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತೋರಿಸಲಾಗುತ್ತದೆ. ಬಂಕ್ ಮಾಲೀಕ ಯಾವುದೇ ಕಾರಣಕ್ಕೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ತೈಲ ಮಾರಾಟ ಮಾಡುವಂತಿಲ್ಲ.

ಈ ಮೇಲಿನ ಹಂತಗಳನ್ನು ಪಾಲಿಸುವ ಮೂಲಕ ತೈಲ ಮೋಸವನ್ನು ತಡೆಗಟ್ಟುವಲ್ಲಿ ಗ್ರಾಹಕರು ಪ್ರಮುಖ ಪಾತ್ರವಹಿಸಬಹುದಾಗಿದ್ದು, ಕಲಬೆರಕೆ ಮುಕ್ತ ತೈಲದ ಹಕ್ಕನ್ನು ಖಚಿತಪಡಿಸಿಕೊಳ್ಳಬಹುದು.

loader