ಬೆಂಗಳೂರು(ಸೆ.5): ಸ್ವಂತಕ್ಕೊಂದು ಸೂರು ಪ್ರತಿಯೊಬ್ಬರ ಕನಸು. ಅದರಂತೆ ಗೃಹ ಖರೀದಿ ಅಥವಾ ನಿರ್ಮಾಣ ಪ್ರತಿಯೊಬ್ಬರ ಜೀವನದ ಯಶಸ್ಸಿನ ಮೈಲಿಗಲ್ಲು ಕೂಡ ಹೌದು. ಬಹುತೇಕ ಜನರು ಗೃಹ ಖರೀದಿ ಅಥವಾ ನಿರ್ಮಾಣಕ್ಕಾಗಿ ಗೃಹ ಸಾಲ ಪಡೆಯುತ್ತಾರೆ.

ಗೃಹ ನಿರ್ಮಾಣಕ್ಕಾಗಿ ಸಾಲ ಮಾಡುವುದರಿಂದ ವ್ಯಕ್ತಿಯ ಹಣಕಾಸು ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡುವುದಾದರೆ, ಗೃಹ ನಿರ್ಮಾಣ, ಖರೀದಿಗಾಗಿ ಸಾಲ ಮಾಡಿದರೆ ಸಿಗುವ ಪ್ರಮುಖ ಲಾಭವೆಂದರೆ ಅದು ತೆರಿಗೆ ಲಾಭ.

ಗೃಹ ಸಾಲದಿಂದ ಎರಡು ರೀತಿಯ ಲಾಭಗಳಿವೆ. ನೀವು ಮನೆ ಖರೀದಿಸಲು ಸಾಲ ತೆಗೆದುಕೊಂಡಿದ್ದರೆ ಆ ಸಾಲದ ಮೂಲ ಮೊತ್ತಕ್ಕೆ ಬಡ್ಡಿ ಸೇರಿಸಿ ಇಎಂಐ ನ್ನೂ ಕಟ್ಟಬೇಕಾಗುತ್ತದೆ. ಹೀಗೆ ಬಡ್ಡಿ ಕಟ್ಟುವುದರ ಮೇಲೆ ಆದಾಯ ತೆರಿಗೆ ನಿಯಮಗಳ ಸೆಕ್ಷನ್ 80 ಸಿ ಪ್ರಕಾರ ನೀವು 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಮತ್ತೊಂದು ಲಾಭವೆಂದರೆ ಮನೆ ಆಸ್ತಿಯ ಆದಾಯಕ್ಕೆ ಸಂಬಂಧಿಸಿದಂತೆ ಮತ್ತೆ ಇಎಂಐ ನಲ್ಲಿ ಬಡ್ಡಿಯ ಭಾಗದಿಂದ ಗರಿಷ್ಠ 2 ಲಕ್ಷ ರೂ. ವರೆಗಿನ ಮೊತ್ತಕ್ಕೆ ನೀವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ಪಡೆಯುವುದರಿಂದ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. 

ಉದ್ಯೋಗದಲ್ಲಿರುವ ವ್ಯಕ್ತಿಯ ವೇತನದಿಂದ ಇಪಿಎಫ್ ಕಡಿತಗೊಳ್ಳುತ್ತಿದ್ದು, ಆ ವ್ಯಕ್ತಿ ಗೃಹ ಸಾಲವನ್ನೂ ಪಡೆದಿದ್ದರೆ, ಸೆಕ್ಷನ್ 80 ಸಿ ಅಡಿಯಲ್ಲಿ ಡಿಡಕ್ಟ್ ಆಗುವ ಬಹುತೇಕ ಮೊತ್ತ, ಇಪಿಎಫ್ ಖಾತೆಯ ಮೂಲಕ ಆಗಿರುತ್ತದೆ. ಆದ್ದರಿಂದ ಗೃಹ ಸಾಲ ಪಡೆದು, 80 ಸಿ ಅಡಿಯಲ್ಲಿ ಬರುವ ಮೊತ್ತದ ಭಾಗದಲ್ಲಿ ತೆರಿಗೆ ಉಳಿತಾಯ ಮಾಡಲು ಹಲವು ಆರ್ಥಿಕ ಸಲಹೆಗಾರರು ಸೂಚಿಸುತ್ತಾರೆ.

ಇನ್ನು 80 ಸಿ ಹಾಗೂ ಸೆಕ್ಷನ್ 24 ರ ವ್ಯಾಪ್ತಿಯಲ್ಲಿ ಕ್ಲೈಮ್ ಮಾಡಬೇಕಾದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 80 ಸಿ ವ್ಯಾಪ್ತಿಯಲ್ಲಿನ ಕ್ಲೈಮ್ ವಿಚಾರದಲ್ಲಿ ಗೃಹ ಖರೀದಿದಾರ ಖರೀದಿಸಿದ ಆ ಆಸ್ತಿಯನ್ನು ಆ ದಿನಾಂಕದಿಂದ ಕನಿಷ್ಟ 5 ವರ್ಷ ತನ್ನಲ್ಲೇ ಉಳಿಸಿಕೊಂಡಿರಬೇಕಾಗುತ್ತದೆ. ಇಲ್ಲವಾದಲ್ಲಿ ಆ ಆಸ್ತಿಯನ್ನು ಮಾರಾಟ ಮಾಡಿದರೆ, 80 ಸಿ ವ್ಯಾಪ್ತಿಯಲ್ಲಿ ಕ್ಲೈಮ್ ಮಾಡಿದ ಮೊತ್ತವನ್ನು ಆಸ್ತಿ ಮಾರಾಟ ಮಾಡಿದ ವರ್ಷದ ಆದಾಯದಲ್ಲಿ ಸೇರಿಸಲಾಗುತ್ತದೆ. 

ಸೆಕ್ಷನ್ 24 ರ ವ್ಯಾಪ್ತಿಯಲ್ಲಿ ಸಾಲ ಮರುಪಾವತಿಯ ಬಡ್ಡಿಯ ಭಾಗದಿಂದ ಗರಿಷ್ಠ 2 ಲಕ್ಷ ರೂಪಾಯಿ ವರೆಗಿನ ಮೊತ್ತಕ್ಕೆ ನೀವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ಆದರೆ ಖರೀದಿಸಿದ, ನಿರ್ಮಿಸಿದ ಮನೆಯನ್ನು ಬಾಡಿಗೆಗೆ ನೀಡಿದರೆ ಪೂರ್ತಿ ಬಡ್ಡಿ ಕಡಿತಗೊಂಡು ತೆರಿಗೆ ವಿನಾಯಿತಿ ಸಿಗದೇ ಇರುವ ಸಾಧ್ಯತೆಗಳಿವೆ.

ಮನೆ ಆಸ್ತಿಯಿಂದ ಉಂಟಾದ ನಷ್ಟಕ್ಕೆ ಒಂದು ವರ್ಷದಲ್ಲಿ 2 ಲಕ್ಷ ನಷ್ಟವನ್ನು ಕ್ಲೈಮ್ ಮಾಡಲು ಅವಕಾಶವಿದ್ದು ಉಳಿದ ನಷ್ಟವನ್ನು, ನಷ್ಟದ ಮೌಲ್ಯಮಾಪನದ ನಂತರದ ವರ್ಷಗಳಲ್ಲಿ ಕ್ಲೈಮ್ ಮಾಡಬಹುದು.