ವಾಸಕ್ಕೊಂದು ಮನೆ ಬೇಕು, ಓಡಾಡೋಕೊಂದು ಕಾರ್ ಬೇಕು, ಕೈನಲ್ಲಿ ಮೊಬೈಲ್, ಸಣ್ಣ ತಿರುಗಾಟಕ್ಕೆ ಸ್ಕೂಟರ್.. ಎಲ್ಲವೂ ಇಎಂಐನಲ್ಲಿ ಸಿಗುವಾಗ ಉಳಿತಾಯ ಏಕೆ? ಬಂದಿರೋ ಸಂಬಳ ಹಾಗೆ ಇಎಂಐಗೆ ಹೋದ್ರೆ ನಷ್ಟವೇನು ಅನ್ನೋರು ನೀವಾಗಿದ್ರೆ ಇಂದಿನಿಂದ್ಲೇ ನಿಮ್ಮ ಲೈಫ್ ಸ್ಟೈಲ್ ಚೇಂಜ್ ಮಾಡ್ಕೊಳ್ಳಿ. 

ನೌಕರಿ ಮಾಡುವ ಈಗಿನ ಬಹುತೇಕ ಜನರು ಕಂತಿನ ಮೇಲೆ ಜೀವನ ನಡೆಸ್ತಾರೆ ಅಂದ್ರೆ ತಪ್ಪಾಗೋದಿಲ್ಲ. ಮನೆಯ ಇಎಂಐ, ಕಾರಿನ ಇಎಂಐ ಸೇರಿದಂತೆ ಮೊಬೈಲ್ ಇಎಂಐವರೆಗೆ ಎಲ್ಲವೂ ಇಎಂಐನಲ್ಲಿಯೇ ಪಾವತಿಯಾಗುತ್ತವೆ. ಈಗಿನ ಮಧ್ಯಮ ವರ್ಗದ ಜನರ ಜೀವನಶೈಲಿ ಬದಲಾಗಿದೆ. ಐಷಾರಾಮಿ ಬದುಕಿನ ಕನಸು ಕಾಣುವ ಜನರು ಹಾಸಿಗೆಗಿಂತ ಮುಂದೆ ಕಾಲು ಚಾಚೋಕೆ ಮುಂದಾಗ್ತಾರೆ. ನಂತ್ರ ಇಎಂಐ ಕಟ್ಟೋದ್ರಲ್ಲಿ ಸುಸ್ತಾಗ್ತಾರೆ. ನಾಲ್ಕೂ ದಿಕ್ಕಿನಿಂದ ಇಎಂಐ ಕಾಟ ಶುರುವಾಗುವ ಕಾರಣ ಕೈನಲ್ಲಿ ಉಳಿಯೋದು ಶೂನ್ಯ. ಇದಕ್ಕೆ ಕಾರಣ ಅವರ ಗಳಿಕೆ ಹಾಗೂ ಖರ್ಚಿನ ನಡುವೆ ಇರುವ ಅಜಗಜಾಂತರ ವ್ಯತ್ಯಾಸ. ಸಂಪಾದನೆ ಮಾಡೋದು ಕಡಿಮೆಯಾದ್ರೂ ಖರ್ಚು ಮಾಡೋದು ಹೆಚ್ಚಾದಾಗ ಜನರು ಸಮಸ್ಯೆಗೆ ಸಿಲುಕ್ತಾರೆ. 

ಈಗಿನ ದಿನಗಳಲ್ಲಿ ಉಳಿತಾಯ (Saving) ಬಹಳ ಮುಖ್ಯ. ಬೆಲೆ ಏರಿಕೆ ಸಂದರ್ಭದಲ್ಲಿ ಉಳಿಸೋದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಬೆಲೆ ಏರಿಕೆ ಈಗ್ಲೂ ಇತ್ತು, ಮುಂದೂ ಇರುತ್ತೆ. ಈಗ್ಲೇ ಉಳಿತಾಯ ಸಾಧ್ಯವಿಲ್ಲ ಎನ್ನುವವರು ಮುಂದೆ ಉಳಿಸ್ತೀರಾ ಅನ್ನೋದಕ್ಕೆ ಗ್ಯಾರಂಟಿ ಏನಿದೆ? 

ಈ 6 ಟಿಪ್ಸ್ ಅನುಸರಿಸಿದ್ರೆ ದೊಡ್ಡ ಪ್ರಮಾಣದ ತೆರಿಗೆ ಉಳಿತಾಯ ಮಾಡ್ಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಸಂಬಳ (Salary) ಹೆಚ್ಚಾದ ಹಾಗೆ ಜವಾಬ್ದಾರಿ ಹೆಚ್ಚಾಗುತ್ತೆ, ಖರ್ಚು ಹೆಚ್ಚಾಗುತ್ತೆ. ಆದ್ರೆ ಉಳಿತಾಯ ಮಾತ್ರ ಕಡಿಮೆಯಾಗ್ತಾ ಬರುತ್ತೆ. ಇದು ತಪ್ಪು. ನೀವು ಸಂಬಳಕ್ಕೆ ತಕ್ಕಂತೆ ಉಳಿತಾಯ ಮಾಡೋದನ್ನು ಕಲಿಯಬೇಕು. ಉಳಿತಾಯ ಮಾಡೋದು ರಾಕೆಟ್ ಸೈನ್ಸ್ ಅಲ್ಲ. ಆದಾಯ (Income) ಮತ್ತು ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಂಡಲ್ಲಿ ನೀವು ಹಣ ಉಳಿತಾಯ ಮಾಡೋದು ಸುಲಭವಾಗುತ್ತದೆ.

ನಿಮಗೆ ಒಂದು ಲಕ್ಷ ರೂಪಾಯಿ ಸಂಬಳ ಬರ್ತಿದೆ ಅಂದ್ರೆ ಅದಲ್ಲಿ ಖರ್ಚು ಮಾಡೋದು ಎಷ್ಟು, ಉಳಿಸೋದು ಎಷ್ಟು ಎಂಬುದನ್ನು ತಿಳಿದಿರಬೇಕು. ಮೊದಲನೇಯದಾಗಿ ನಿಮ್ಮ ಸಂಬಳದ ಅರ್ಧ ಅಂದ್ರೆ ಶೇಕಡಾ 50ರಷ್ಟನ್ನು ಅವಶ್ಯಕತೆಯಿರುವ ಕೆಲಸಕ್ಕೆ ಖರ್ಚು ಮಾಡಿ. ಆಹಾರ, ಶಿಕ್ಷಣ ಹಾಗೂ ವಾಸದ ಖರ್ಚು ಸೇರಿರಲಿ. ಬಾಡಿಗೆ ಮನೆಯಲ್ಲಿದ್ದರೆ ಅದ್ರ ಖರ್ಚು, ಮಕ್ಕಳ ಶಿಕ್ಷಣಕ್ಕೆ ಬೇಗಾದ ಹಣವನ್ನು ಲೆಕ್ಕ ಹಾಕಿ. ಸಂಬಳ ಬರ್ತಿದ್ದಂತೆ ನೀವು 50 ಸಾವಿರವನ್ನು ಈ ಖರ್ಚಿಗೆ ತೆಗೆದಿಡಿ. ಇಲ್ಲವೆ ಬೇರೆ ಖಾತೆಗೆ ವರ್ಗಾವಣೆ ಮಾಡಿಟ್ಟುಕೊಳ್ಳಿ. 50 ಸಾವಿರ ರೂಪಾಯಿಯಲ್ಲೇ ಹೊರಗೆ ಸುತ್ತಾಡೋದು, ಹೊಟೇಲ್ ಖರ್ಚು, ಪ್ರವಾಸದ ಖರ್ಚು ಸೇರಿದಂತೆ ತಿಂಗಳ ಎಲ್ಲ ಖರ್ಚು ಬರಬೇಕು.

ಇನ್ಮೂರೇ ದಿನ ಆಧಾರ್-ಪಾನ್ ಲಿಂಕ್ ಮಾಡೋಕೆ, ಈ ಕೆಲ್ಸವನ್ನೆಲ್ಲಾ ಮುಗಿಸಿ ಬಿಡಿ!

ಮನೆ ಹಾಗೂ ಕಾರ್ ಸಾಲದ ಫಾರ್ಮುಲಾ (Car Loan Formula) : ಸಂಬಳದಲ್ಲಿ ಶೇಕಡಾ 30ರಷ್ಟನ್ನು ಗೃಹ ಸಾಲಕ್ಕೆ ಮೀಸಲಿಡಿ. ನಿಮಗೆ ಒಂದು ಲಕ್ಷ ತಿಂಗಳ ಸಂಬಳ ಬರ್ತಿದ್ದರೆ ನೀವು ಶೇಕಡಾ 20ರಷ್ಟನ್ನು ಮಾತ್ರ ಗೃಹ ಸಾಲಕ್ಕೆ ನೀಡಬೇಕು. ಕಾರ್ ಖರೀದಿ ಮಾಡಿದ್ದು ಅದ್ರ ಲೋನ್ ತೀರಿಸಲು ನೀವು ಸಂಬಳದ ಶೇಕಡಾ 10ರಷ್ಟನ್ನು ಮಾತ್ರ ತೆಗೆದಿಡಬೇಕು. 10 ಸಾವಿರಕ್ಕಿಂತ ಹೆಚ್ಚು ಹಣವನ್ನು ನೀವು ಇಎಂಐಗೆ ಪಾವತಿ ಮಾಡಬೇಡಿ. ಕಾರ್ ಲೋನ್ ಇಲ್ಲ ಎನ್ನುವವರು ಸಂಬಳದ ಶೇಕಡಾ 30ರಷ್ಟನ್ನು ಗೃಹ ಸಾಲಕ್ಕೆ ತೆಗೆದಿಡಬಹುದು.

ತಿಂಗಳಲ್ಲಿ ಎಷ್ಟು ಹಣ ಉಳಿಸಬೇಕು? : ನಿಮ್ಮ ಸಂಬಳದ ಎಲ್ಲ ಖರ್ಚು ಕಳೆದ್ಮೇಲೆ ಉಳಿಯುವ ಶೇಕಡಾ 20ರಷ್ಟನ್ನಾದ್ರೂ ನೀವು ಉಳಿಸ್ಲೇಬೇಕು. ನೀವು ಮ್ಯೂಚುವಲ್ ಫಂಡ್ ಅಥವಾ ಬೇರೆ ಯಾವುದೇ ಸುರಕ್ಷಿತ ಹೂಡಿಕೆಯಲ್ಲಿ ಹಣ ಹಾಕುವ ಮೂಲಕ ಉಳಿತಾಯ ಮಾಡಿ. ಇದು ಕಷ್ಟದ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿದೆ. ಸತತ 20 ವರ್ಷಗಳ ಕಾಲ ನೀವು ಇದೇ ಫಾರ್ಮೂಲಾ ಬಳಕೆ ಮಾಡಿದ್ರೆ ನಿವೃತ್ತಿ ಫಂಡ್ ಬಗ್ಗೆ ಆಲೋಚನೆ ಮಾಡುವ ಅಗತ್ಯವಿರೋದಿಲ್ಲ. ಆ ಸಮಯದಲ್ಲಿ ನೀವು ಆರಾಮವಾಗಿ ಜೀವನ ಕಳೆಯಬಹುದು. ನಿಮ್ಮ 60ನೇ ವಯಸ್ಸಿನಲ್ಲಿ ದೊಡ್ಡ ಮೊತ್ತ ನಿಮ್ಮ ಕೈನಲ್ಲಿರುವ ಕಾರಣ ಆಗ ದುಡಿಯಬೇಕಾದ ಅಗತ್ಯತೆ ಇರೋದಿಲ್ಲ.

ಎಮರ್ಜೆನ್ಸಿ ಫಂಡ್ ಅವಶ್ಯಕ (Emergency Fund) : ಪ್ರತಿಯೊಬ್ಬರಿಗೂ ತುರ್ತು ಫಂಡ್ ಅಗತ್ಯವಿರುತ್ತದೆ. ನಿಮ್ಮ ಸಂಬಳ ಒಂದು ಲಕ್ಷವಾಗಿದ್ರೆ ನಿಮ್ಮ ಬಳಿ 3 ಲಕ್ಷ ಎಮರ್ಜೆನ್ಸಿ ಫಂಡ್ ಇರಬೇಕು. ಕೊರೊನಾ ಸಂದರ್ಭದಲ್ಲಿ ಇದ್ರ ಮಹತ್ವ ಅನೇಕರಿಗೆ ತಿಳಿದಿದೆ.