Asianet Suvarna News Asianet Suvarna News

ನಿಸ್ಸಾನ್ ರಿಸರ್ಚ್ ಹಬ್ ಗೆ ಕೇರಳದ ‘ಕೆಂಪು’ಹಾಸು!

ಕೇರಳಕ್ಕೆ ನಿಸ್ಸಾನ್ ಜಾಗತಿಕ ಸಂಶೋಧನಾ ಕೇಂದ್ರ

ನಿಸ್ಸಾನ್-ಕೇರಳ ಸರ್ಕಾರದ ಮಹತ್ವದ ಒಪ್ಪಂದ

ಆಡಳಿತ-ವಿರೋಧ ಪಕ್ಷಗಳ ಅಪರೂಪದ ಸಹಕಾರ

ಉದ್ಯೋಗ ಸೃಷ್ಟಿಗೆ ಒಗ್ಗೂಡಿದ ಅಪರೂಪದ ನಿದರ್ಶನ
 

How Kerala got the Nissan deal
Author
Bengaluru, First Published Jul 25, 2018, 3:30 PM IST

ತಿರುವನಂತಪುರಂ(ಜು.25): ಹೌದು, ವಿಶ್ವ ವಿಖ್ಯಾತ ಕಾರು ಉತ್ಪಾದನಾ ಕಂಪನಿ ನಿಸ್ಸಾನ್, ತನ್ನ ಜಾಗತಿಕ ಸಂಶೋಧನಾ ಕೇಂದ್ರವನ್ನು ಕೇರಳದ ತಿರುವನಂತಪುರಂನಲ್ಲಿ ಸ್ಥಾಪಿಸಲಿದೆ. ಕಮ್ಯೂನಿಸ್ಟರ ನಾಡಿನಲ್ಲಿ ಬೃಹತ್ ಬಂಡವಾಳಶಾಹೀ ಕಂಪನಿಗಳಿಗೆ ಸ್ಥಾನವಿಲ್ಲ ಎನ್ನುವವರೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಕೇರಳ ಸರ್ಕಾರ.

ಕಾರು ಉತ್ಪಾದನಾ ಕಂಪನಿ ನಿಸ್ಸಾನ್ ಭಾರತದಲ್ಲಿ ಚಾಲಕರಹಿತ ಎಲೆಕ್ಟ್ರಿಕ್ ಕಾರು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿತ್ತು. ಇದಕ್ಕಾಗಿ ಸೂಕ್ತ ರಾಜ್ಯದ ಹುಡುಕಾಟದಲ್ಲಿದ್ದ ಕಂಪನಿಗೆ ‘ಕೆಂಪು’ಹಾಸು ಸ್ವಾಗತ ನೀಡಿದ್ದು ಕೇರಳ ರಾಜ್ಯ.

ಖುದ್ದು ಸಿಎಂ ಪಿಣರಾಯಿ ವಿಜಯನ್ ಈ ಕುರಿತು ಆಸಕ್ತಿ ವಹಿಸಿ, ಕಂಪನಿಯ ನಿಯೋಗದೊಂದಿಗೆ ನಿರಂತರ ಮಾತುಕತೆ ನಡೆಸಿದ್ದರು. ಅಲ್ಲದೇ ಜಪಾನ್ ನಿಂದ ಬಂದ ನಿಯೋಗವನ್ನು ತಮ್ಮ ಮನೆಗೇ ಆಹ್ವಾನಿಸಿ ಕೇರಳ ಶೈಲಿಯ ಊಟ ಬಡಿಸಿ ಗಮನ ಸೆಳೆದಿದ್ದರು.

ಇಷ್ಟೇ ಅಲ್ಲದೇ ಕೇರಳದ ವಿಪಕ್ಷಗಳೂ ಕೂಡ ಸರ್ಕಾರದ ಜೊತೆ ಕೈಜೋಡಿಸಿ ನಿಸ್ಸಾನ್ ಒಪ್ಪಂದ ಯಶಸ್ವಿಯಾಗುವಂತೆ ನೋಡಿಕೊಂಡರು. ಅದರಲ್ಲೂ ಸಂಸದ ಶಶಿ ತರೂರ್ ಕೇರಳ ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಒಪ್ಪಂದ ಯಶಸ್ವಿಗೆ ತಮ್ಮದೇ ಕೊಡುಗೆ ನೀಡಿದರು. ಅಲ್ಲದೇ ಸಿಎಂ ಮನವಿ ಮೇರೆಗೆ ಕೇಂದ್ರ ಸಚಿವ ಮತ್ತು ಕೇರಳ ಬಿಜೆಪಿಯ ಪ್ರಮುಖ ನಾಯಕ ಅಲ್ಫಾನ್ಸೋ ಅವರೂ ಕೂಡ ಜಪಾನ್ ನಿಯೋಗದೊಂದಿಗಿನ ಸಭೆಯಲ್ಲಿ ಭಾಗವಹಿಸಿ ಅಗತ್ಯ ನೆರವಿನ ಭರವಸೆ ನೀಡಿದರು.

ನಿಸ್ಸಾನ್ ಜಾಗತಿಕ ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ರಾಜ್ಯದಲ್ಲಿ 3000 ನೇರ ಉದ್ಯೋಗ ಮತ್ತು ಸಾವಿರಾರು ಅಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಭರವಸೆ ಕೇರಳ ರಾಜ್ಯ ಸರ್ಕಾರದ್ದು. ರಾಜ್ಯದ ಅಭಿವೃದ್ಧಿಗಾಗಿ ನಿಸ್ಸಾನ್ ಸಂಶೋಧನಾ ಕೇಂದ್ರವನ್ನು ರಾಜ್ಯಕ್ಕೆ ಕರೆತರುವಲ್ಲಿ ಆಡಳಿತ, ವಿರೋಧ ಪಕ್ಷಗಳು ಒಗ್ಗೂಡಿ ನಡೆಸಿದ ಅಪರೂಪದ ಪ್ರಯತ್ನ ಮಾತ್ರ ಇತರ ರಾಜ್ಯಗಳಿಗೆ ಮಾದರಿಯಾಗಿದೆ.  

Follow Us:
Download App:
  • android
  • ios