ಪ್ರಾಮಾಣಿಕ ತೆರಿಗೆದಾರರಿಗೆ ನಮೋ ಎಂದ ಪ್ರಧಾನಿ! ದೇಶ ನಡೆಯುತ್ತಿರುವುದೇ ತೆರಿಗೆದಾರರಿಂದ! ಸರ್ಕಾರದ ಯೋಜನೆಗಳ ಹಿಂದಿನ ಶಕ್ತಿ ತೆರಿಗೆದಾರರು! ಪ್ರಾಮಾಣಿಕ ತೆರಿಗೆದಾರರಿಗೆ ಪುಣ್ಯ ಬರಲಿ ಎಂದು ಹಾರೈಕೆ

ನವದೆಹಲಿ(ಆ.15): ತೆರಿಗೆದಾರರು ಭಾರತದ ನಿಜವಾದ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ೭೨ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರರಾಜಧಾನಿ ನವದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ, ತೆರಿಗೆದಾರರೇ ಸರ್ಕಾರದ ಎಲ್ಲಾ ಯೋಜನೆಗಳ ಹಿಂದಿನ ಶಕ್ತಿ ಎಂದು ಹೇಳಿದ್ದಾರೆ.

ಪ್ರಾಮಾಣಿಕ ತೆರಿಗೆದಾರರು ಕಟ್ಟಿದ ಹಣದಿಂದಲೇ ಈ ದೇಶ ನಡೆಯುತ್ತಿದ್ದು, ಸರ್ಕಾರದ ಯೋಜನೆಗಳು ಜನರನ್ನು ತಲುಪಲು ತೆರಿಗೆದಾರರು ಮಹತ್ವದ ಪಾತ್ರವಹಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ತೆರಿಗೆದಾರರಿಗೆ ಖಂಡಿತ ಪುಣ್ಯ ಬರುತ್ತದೆ ಎಂದು ಹೇಳಿದ ಮೋದಿ, ನಿಮ್ಮ ಹಣ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿನಿಯೋಗವಾಗಲಿದೆ ಎಂಬ ಭರವಸೆಯನ್ನು ತಾವು ಈ ವೇದಿಕೆ ಮೇಲಿಂದ ನೀಡುವುದಾಗಿ ಭರವಸೆ ನೀಡಿದರು.

Scroll to load tweet…

ಸ್ವಾತಂತ್ರ್ಯದ ಬಳಿಕ ನೇರವಾಗಿ ತೆರಿಗೆ ಕಟ್ಟುವವರ ಸಂಖ್ಯೆ ದ್ವಿಗುಣವಾಗಿದ್ದು, ಜಿಎಸ್ ಟಿ ಜಾರಿ ಬಳಿಕ ಪರೋಕ್ಷ ತೆರಿಗೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಪ್ರಾಮಾಣಿಕ ತೆರಿಗೆದಾರರು ತಮ್ಮ ಕುಟುಂಬದವರೊಡನೆ ಕುಳಿತು ಊಟ ಮಾಡುವಾಗ ತಮ್ಮಿಂದಾಗಿ ಕನಿಷ್ಠ ಮೂರು ಕುಟುಂಬ ಇದೇ ರೀತಿ ಊಟ ಮಾಡುತ್ತಿದೆ ಎಂಬ ಆತ್ಮ ತೃಪ್ತಿ ಇರುತ್ತದೆ ಎಂದು ಮೋದಿ ಭಾವನಾತ್ಮಕವಾಗಿ ಜನರ ಮನಸ್ಸನ್ನು ಮುಟ್ಟಿದರು.