ರಾಜ್ಯದಲ್ಲಿ 'ಹೀರೋ' 11000 ಕೋಟಿ ಹೂಡಿಕೆ : 3000 ಉದ್ಯೋಗ ಸೃಷ್ಟಿ: ಎಂಬಿಪಾ
ಕರ್ನಾಟಕದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 'ಹೀರೋ ಫ್ಯೂಚರ್ ಎನರ್ಜೀಸ್' ₹11,000 ಕೋಟಿ ಹೂಡಿಕೆ ಮಾಡಲಿದೆ. ಈ ಒಪ್ಪಂದವು 3,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು 2025-26ರಿಂದ ಯೋಜನೆಗಳು ಆರಂಭವಾಗಲಿವೆ.
ಬೆಂಗಳೂರು: ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 11000 ಕೋಟಿ ರು. ಬಂಡವಾಳ ಹೂಡಿಕೆಗೆ 'ಹೀರೋ ಪ್ಯೂಚರ್ ಎನರ್ಜಿಸ್ ಪ್ರೈವೇಟ್ ಲಿಮಿಟೆಡ್' (ಎಚ್‌ಎಫ್‌ಇಪಿಎಲ್) ರಾಜ್ಯ ಸರ್ಕಾರ ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗ ಲಂಡನ್‌ನಲ್ಲಿ ನಡೆಸುತ್ತಿರುವ ಅಂತರ್ ರಾಷ್ಟ್ರೀಯ ರೋಡ್ ಶೋದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ಹೀರೊ ಪ್ಯೂಚರ್ ಎನರ್ಜಿಯ ಮುಖ್ಯ ಹಣಕಾಸು ಅಧಿಕಾರಿ ಬೆಂಜಮಿನ್ ಪೌಲ್ ಟ್ರೇಸರ್ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಮುಂದಿನ ವಿತ್ತ ವರ್ಷದಿಂದ ಆರಂಭ:
ಎಚ್‌ಎಫ್‌ಇಪಿಎಲ್‌ನ 11000 ಕೋಟಿ ರು. ಬಂಡವಾಳ ರಾಜ್ಯದ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಬಳಕೆ ಆಗಲಿದೆ. ಪ್ರಸ್ತಾವಿತ ಯೋಜನೆಗಳು ರಾಜ್ಯದಲ್ಲಿ 2025-26 ರಿಂದ ಕಾರ್ಯಾರಂಭಗೊಳ್ಳಲಿದ್ದು, ನಂತರದ ಎರಡ್ಮೂರು ವರ್ಷಗಳಲ್ಲಿ ಈ ಮೊತ್ತದ ಪೂರ್ಣ ಹೂಡಿಕೆ ಆಗಲಿದೆ. ಈ ಒಪ್ಪಂದದಿಂದ ರಾಜ್ಯದಲ್ಲಿ ಸುಮಾರು 3,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರಕ್ಕೂ ಹೆಚ್ಚು ಗಿಗಾ ವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದೊಂದಿಗೆ ನಾವು ಮಾಲಿನ್ಯ ತಗ್ಗಿಸುವ ಪ್ರಯತ್ನಗಳನ್ನು ಸಾರಿಗೆ ಮತ್ತು ಭಾರಿ ಎಂಜಿನಿಯರಿಂಗ್ ತಯಾರಿಕೆ ಯಂಥ ಕೈಗಾರಿಕೆಗಳಿಗೆ ವಿಸ್ತರಿಸುತ್ತಿದ್ದೇವೆ ಎಂದು ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.