ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಹೈಕೋರ್ಟ್ ತಡೆ ನೀಡಿದೆ. ಓಲಾ, ಉಬರ್, ರ‍್ಯಾಪಿಡೋ ಸೇವೆಗಳನ್ನು ಜೂನ್ 15ರವರೆಗೆ ಮುಂದುವರೆಸಲು ಅವಕಾಶ ನೀಡಲಾಗಿದೆ. ಚಾಲಕರು, ಗ್ರಾಹಕರ ಮೇಲಾಗುವ ಪರಿಣಾಮ ಪರಿಗಣಿಸಿ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ. ಬೈಕ್ ಟ್ಯಾಕ್ಸಿ ಕಾನೂನುಬದ್ಧತೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.
ಜನ ಸಾಮಾನ್ಯರಿಗೆ ಹೆಚ್ಚು ಜನಪ್ರಿಯವಾಗಿದ್ದ, ರ‍್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡು ಕಂಗಾಲಾಗಿದ್ದ ಇವುಗಳ ಚಾಲಕರು ಹಾಗೂ ಇದನ್ನೇ ನಂಬಿಕೊಂಡಿದ್ದ ಗ್ರಾಹಕರಿಗೆ ಹೈಕೋರ್ಟ್ ಕೊಂಚ ರಿಲೀಫ್ ಕೊಟ್ಟಿದೆ. ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಓಲಾ, ಉಬರ್ ಮತ್ತು ರ‍್ಯಾಪಿಡೋಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದ ಹೈಕೋರ್ಟ್ ಏಪ್ರಿಲ್ 2ರ ತನ್ನ ಆದೇಶದಲ್ಲಿ ಆರು ವಾರಗಳಲ್ಲಿ ಈ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ದ್ವಿಚಕ್ರವನ್ನು ಸಾರಿಗೆ ವಾಹನಗಳಾಗಿ ಪರಿವರ್ತಿಸಿ ನೋಂದಾಯಿಸಲು 2022 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಕಳೆದ ತಿಂಗಳು ವಜಾಗೊಳಿಸಿ ಈ ಆದೇಶ ಹೊರಡಿಸಲಾಗಿತ್ತು.
ಬಸ್ ಸೌಲಭ್ಯಗಳು ಸರಿಯಾಗಿ ಇಲ್ಲದ ಈ ದಿನಗಳಲ್ಲಿ, ಪ್ರತಿನಿತ್ಯ ಕಚೇರಿಗೆ ಹೋಗುತ್ತಿದ್ದವರಿಗೆ ಹೈಕೋರ್ಟ್ ನೀಡಿದ್ದ ಆದೇಶದಿಂದ ಭಾರಿ ಸಂಕಷ್ಟ ಉಂಟಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಇದನ್ನೇ ನಂಬಿ ಜೀವನ ಮಾಡುತ್ತಿರುವವರಿಗೆ ಭಾರಿ ಕಷ್ಟವೂ ಉಂಟಾಗಿತ್ತು. ಆದ್ದರಿಂದ ಈ ಆದೇಶವನ್ನು ಪ್ರಶ್ನಿಸಿ, ಊಬರ್ ಇಂಡಿಯಾ, ರ‍್ಯಾಪಿಡೊ ಮತ್ತು ಓಲಾ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ಹೈಕೋರ್ಟ್ ಸದ್ಯ ಮಾನ್ಯ ಮಾಡಿದೆ. ಈ ಸೇವೆಗಳನ್ನು ಜೂನ್ 15ರವರೆಗೆ ಮುಂದುವರೆಸಲು ಅನುಕೂಲ ಕಲ್ಪಿಸಿದೆ. ತಮ್ಮ ಸೇವೆಯನ್ನು ತಕ್ಷಣ ಸ್ಥಗಿತಗೊಳಿಸುವುದರಿಂದ ಗ್ರಾಹಕರಿಗೆ ತೊಂದರೆಯಾಗುವುದಲ್ಲದೆ, ರೈಡರ್‌ಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಮಾಡಿಕೊಂಡಿರುವ ಮನವಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಮಾನ್ಯ ಮಾಡಿದ್ದಾರೆ. ಇದರಿಂದಾಗಿ ಸದ್ಯದ ಮಟ್ಟಿಗೆ ಚಾಲಕರಿಗೆ ಜೀವ ಬಂದಂತಾಗಿದೆ.
ಇನ್ನೂ ಹತ್ತೇ ವರ್ಷ: ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಬಿಲ್ ಗೇಟ್ಸ್ ಶಾಕಿಂಗ್ ವಿಷ್ಯ ರಿವೀಲ್!
ಅಷ್ಟಕ್ಕೂ ಈ ಸೇವೆ ಸ್ಥಗಿತ ಮಾಡಲು ಕಾರಣವೂ ಇದೆ. 1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಅಡಿಯಲ್ಲಿ ರಾಜ್ಯ ಸರ್ಕಾರವು ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು, ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುವ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ವಾಣಿಜ್ಯ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಿಲ್ಲದ ಕಾರಣ ಬೈಕ್ ಟ್ಯಾಕ್ಸಿಗಳು ಕಾನೂನು ಬಾಹಿರ ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಇಂಥದ್ದೊಂದು ಆದೇಶ ಹೊರಡಿಸಿತ್ತು.
ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ನೀಡಿದ ಮಧ್ಯಂತರ ಆದೇಶದ ಆಧಾರದ ಮೇಲೆ ಓಲಾ, ಉಬರ್ ಮತ್ತು ರ್ಯಾಪಿಡೊ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುತ್ತಿವೆ ಎಂಬ ಅಂಶಗಳನ್ನು ಗಮನಿಸಿತು. ಆದ್ದರಿಂದ ಇದನ್ನು ಮುಂದುವರಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು. ಹಾಗೂ ಆರು ವಾರಗಳ ನಂತರ ಇದನ್ನು ನಿಷೇಧಿಸಬೇಕೆಂದು ಹೇಳಿತ್ತು. ಜೊತೆಗೆ ರಾಜ್ಯ ಸರ್ಕಾರ ಇದನ್ನು ಖಚಿತಪಡಿಸಬೇಕೆಂದು ಕೂಡ ನ್ಯಾಯಾಲಯ ನಿರ್ದೇಶಿಸಿತ್ತು. ಅದರ ಅನ್ವಯ ಈ ಆದೇಶವನ್ನು ಸಾರಿಗೆ ಸಚಿವರು ಇಂದು ಹೊರಡಿಸಿದ್ದರು.
ವರ್ಷಗಟ್ಟಲೆ ರಜೆ ಕೊಟ್ಟು ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ಕೊಡ್ತಿದೆ ಗೂಗಲ್: ಕಾರಣ ಮಾತ್ರ ವಿಚಿತ್ರ!


