ಲಂಡನ್(ಸೆ.27)‌: ‘ನನ್ನ ಬಳಿ ಬಿಡಿಗಾಸೂ ಇಲ್ಲ. ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುತ್ತಿದ್ದೇನೆ. ಮಗನಿಂದ ಸಾಲ ಪಡೆದಿದ್ದೇನೆ. ವೈಭೋಗದ ಜೀವನ ಮಾಡುತ್ತಿಲ್ಲ. ಶಿಸ್ತುಬದ್ಧವಾಗಿ ಬದುಕುತ್ತಿದ್ದೇನೆ’ ಎಂದು ಕೆಲವೇ ವರ್ಷಗಳ ಹಿಂದೆ ಸಹಸ್ರಾರು ಕೋಟಿ ರು. ಒಡೆಯರಾಗಿದ್ದ ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ.

ಚೀನಾ ಕಂಪನಿಗಳು ಲಂಡನ್‌ ಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಕಾನೂನು ಸಮರ ನಡೆಸುವುದಕ್ಕೆ ಬೇಕಾದ ಕಾನೂನು ಶುಲ್ಕ ಹೊಂದಿಸಲು ಹಣ ಇಲ್ಲದೆ ನನ್ನ ಬಳಿ ಇದ್ದ ಆಭರಣವನ್ನೂ ಮಾರಿಕೊಂಡಿದ್ದೇನೆ ಎಂದು ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಮುಕೇಶ್‌ ಅಂಬಾನಿ ಅವರ ಖಾಸಾ ಸೋದರ ಆಗಿರುವ ಅನಿಲ್‌ ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿಗೆ 2012ರಲ್ಲಿ ಚೀನಾದ 3 ಕಂಪನಿಗಳು 6800 ಕೋಟಿ ರು. ಸಾಲ ನೀಡಿದ್ದವು. ಅದಕ್ಕೆ ಅನಿಲ್‌ ಅಂಬಾನಿ ವೈಯಕ್ತಿಕ ಖಾತ್ರಿ ನೀಡಿದ್ದರು. ಆದರೆ ಆ ಒಪ್ಪಂದ ಉಲ್ಲಂಘನೆಯಾಗಿದೆ. ಯಾವುದೇ ಖಾತ್ರಿ ನೀಡಿಲ್ಲ ಎಂದು ಅಂಬಾನಿ ಹೇಳುತ್ತಿದ್ದಾರೆ ಎಂದು ಚೀನಾದ ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾದ ಮುಂಬೈ ಶಾಖೆ, ಚೀನಾ ಅಭಿವೃದ್ಧಿ ಬ್ಯಾಂಕ್‌ ಹಾಗೂ ಎಕ್ಸಿಮ್‌ ಬ್ಯಾಂಕ್‌ ಆಫ್‌ ಚೀನಾಗಳು ಅನಿಲ್‌ ಅಂಬಾನಿ ವಿರುದ್ಧ ಲಂಡನ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ.

ಅನಿಲ್‌ ಅಂಬಾನಿ ಅವರು ವೈಯಕ್ತಿಕ ಖಾತ್ರಿ ನೀಡಿರುವುದರಿಂದ ಚೀನಾದ ಮೂರೂ ಬ್ಯಾಂಕುಗಳಿಗೆ 5200 ಕೋಟಿ ರು. ಅನ್ನು ಶೀಘ್ರ ಪಾವತಿಸಬೇಕು ಎಂದು ಕಳೆದ ಮೇನಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಹೈಕೋರ್ಟ್‌ ಸೂಚನೆ ನೀಡಿತ್ತು. ಆದರೆ ಅನಿಲ್‌ ಅಂಬಾನಿ ಪಾವತಿ ಮಾಡಿಲ್ಲ. ಹೀಗಾಗಿ 73 ಲಕ್ಷ ರು.ಗಿಂತ ಅಧಿಕ ಸಂಪತ್ತು ವಿಶ್ವದ ಎಲ್ಲೆಲ್ಲಿ ಇದೆಯೋ ಅದರ ಸ್ಟೇಟ್‌ಮೆಂಟ್‌ ಹಾಗೂ ಕಳೆದ 24 ತಿಂಗಳ ಕ್ರೆಡಿಟ್‌ ಕಾರ್ಡ್‌ ಸ್ಟೇಟ್‌ಮೆಂಟ್‌ ನೀಡಬೇಕು ಎಂದು ಕೋರ್ಟ್‌ ತಾಕೀತು ಮಾಡಿತ್ತು.

ಆ ವಿಚಾರಣೆಗೆ ಮುಂಬೈನಿಂದಲೇ ವಿಡಿಯೋ ಕಾನ್ಪರೆನ್ಸ್‌ ಮೂಲಕ ಹಾಜರಾದ ಅನಿಲ್‌ ಅವರಿಗೆ, ಅವರ ಐಷಾರಾಮಿ ಜೀವನದ ಕುರಿತು ಪ್ರತಿವಾದಿ ವಕೀಲರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅನಿಲ್‌ ಅಂಬಾನಿ, ಐಷಾರಾಮಿ ಕಾರು ಹೊಂದಿದ್ದೇನೆ ಎಂಬುದು ಮಾಧ್ಯಮಗಳ ಊಹಾತ್ಮಕ ವರದಿ. ನಾನೊಬ್ಬ ಕುಟುಂಬ ಹಾಗೂ ಕಂಪನಿ ಬಗ್ಗೆ ಬದ್ಧತೆ ಹೊಂದಿರುವ 61 ವರ್ಷದ ವ್ಯಕ್ತಿ. ಮ್ಯಾರಥಾನ್‌ ರನ್ನರ್‌. ಆಧ್ಯಾತ್ಮಿಕತೆ ಬಗ್ಗೆ ಒಲವು ಹೊಂದಿರುವಾತ. ಜೀವನಪೂರ್ತಿ ಸಸ್ಯಾಹಾರಿ. ಮದ್ಯಪಾನ, ಧೂಮಪಾನ ಮಾಡುವುದಿಲ್ಲ. ಹೊರಗೆ ಹೋಗುವ ಬದಲು ಮಕ್ಕಳ ಜತೆ ಮನೆಯಲ್ಲೇ ಸಿನಿಮಾ ನೋಡುವಾತ ಎಂದು ವಿವರಿಸಿದ್ದಾರೆ.

ಪತ್ನಿಗೆ ಯಾಚ್‌ ಉಡುಗೊರೆ ಕೊಟ್ಟಿದ್ದೀರಂತೆ ಎಂಬ ವಕೀಲರ ಪ್ರಶ್ನೆಗೆ, ನನಗೆ ಸಮುದ್ರ ಎಂದರೆ ಆಗುವುದಿಲ್ಲ. ಹಲವು ವರ್ಷಗಳ ಕಾಲ ನಾವು ಯಾಚ್‌ ಬಳಸಿಲ್ಲ ಎಂದು ಉತ್ತರಿಸಿದ್ದಾರೆ.