Ratan Tata biography: ರತನ್ ಟಾಟಾ ಜೀವನಚರಿತ್ರೆ ದಾಖಲೆ ಮೊತ್ತಕ್ಕೆ ಮಾರಾಟ!
ಟಾಟಾ ಸನ್ಸ್ ಮಾಜಿ ಚೇರ್ಮನ್ ರತನ್ ಟಾಟಾ ಜೀವನಚರಿತ್ರೆ
ಕೇರಳ ಮೂಲದ ಮಾಜಿ ಅಧಿಕಾರಿ ಥಾಮಸ್ ಮ್ಯಾಥ್ಯೂ ಬರೆದ ಕೃತಿ
ಜಾಗತಿಕ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಖರೀದಿ ಮಾಡಿದ ಹಾರ್ಪರ್ ಕಾಲಿನ್ಸ್
ಬೆಂಗಳೂರು (ಜ. 7): ಕೈಗಾರಿಕೋದ್ಯಮಿ, ದೇಶದ ಅತಿದೊಡ್ಡ ಸಮೂಹ ಟಾಟಾ ಸನ್ಸ್ ನ (TATA Sons) ಮಾಜಿ ಚೇರ್ಮನ್ ರತನ್ ಟಾಟಾ (Ratan Tata) ಅವರ ಜೀವನ ಚರಿತ್ರೆಯನ್ನು ಹಾರ್ಪರ್ ಕಾಲಿನ್ಸ್ (HarperCollins ) ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದೆ. ಸಂಪೂರ್ಣ ನೈಜ ಅಂಶಗಳನ್ನು ಒಳಗೊಂಡ ನಾನ್-ಫಿಕ್ಷನ್ (Non-Fiction) ಜೀವನಚರಿತ್ರೆಯನ್ನು ಕೇರಳ (Kerala) ಮೂಲದ ಮಾಜಿ ಅಧಿಕಾರಿ ಐಎಎಸ್ ಥಾಮಸ್ ಮ್ಯಾಥ್ಯೂ (Thomas Mathew) ಬರೆದಿದ್ದು, ಜಾಗತಿಕ ಹರಾಜಿನಲ್ಲಿ ಇದನ್ನು ಖರೀದಿಸುವಲ್ಲಿ ಹಾರ್ಪರ್ ಕಾಲಿನ್ಸ್ ಯಶಸ್ವಿಯಾಗಿದೆ. ಭಾರತೀಯ ಕೈಗಾರಿಕಾ ಕ್ಷೇತ್ರದ ಅತ್ಯಂತ ಪ್ರಸಿದ್ಧ ಮುಖವಾಗಿರುವ ರತನ್ ಟಾಟಾ ಅವರ ಪುಸ್ತಕವನ್ನು ಪ್ರಕಟಿಸುವ ಹಕ್ಕು ಇನ್ನು ಹಾರ್ಪರ್ ಕಾಲಿನ್ಸ್ ಗೆ ಇರಲಿದೆ. ಈ ಪುಸ್ತಕದಲ್ಲಿ ರತನ್ ಟಾಟಾ ಅವರ ಬಾಲ್ಯ, ಕಾಲೇಜು ದಿನಗಳು ಹಾಗೂ ಆರಂಭಿಕ ದಿನಗಳಲ್ಲಿ ಅವರಿಗೆ ಪ್ರಭಾವಬೀರಿದ ವ್ಯಕ್ತಿಗಳ ಕುರಿತಾದ ವಿವರಗಳನ್ನು ಒಳಗೊಂಡಿರುತ್ತದೆ.
ಬಹು ವರ್ಷಗಳಿಂದ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಖಾಸಗಿ ಪತ್ರಗಳು, ಛಾಯಾಚಿತ್ರಗಳು ಕುರಿತಾದ ಮಾಹಿತಿಯನ್ನು ಹೊಂದಿದ್ದ ಮ್ಯಾತ್ಯೂ, ಟಾಟಾ ಮೋಟಾರ್ಸ್ (Tata Motars) ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ಅಗ್ಗದ ಕಾರು ನ್ಯಾನೋ (NaNo)ತಯಾರಿಕೆ, ಟಾಟಾ ಸ್ಟೀಲ್ (Tata Steel)ಮತ್ತು ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡಂಥ ಇತ್ತೀಚಿನ ಘಟನೆಗಳನ್ನೂ ಇದರಲ್ಲಿ ದಾಖಲಿಸಿದ್ದಾರೆ. ಅದರೊಂದಿಗೆ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ವಿವಾದಾತ್ಮಕ ನಿರ್ಗಮನದ ವಿಚಾರವೂ ಈ ಪುಸ್ತಕದಲ್ಲಿದೆ. 1983ರ ಬ್ಯಾಚ್ ನ ಐಎಎಸ್ ಅಧಿಕಾರಿಗೆ ತಮ್ಮ ಕುರಿತಾದ ಜೀವನಚರಿತ್ರೆಯನ್ನು ಬರೆಯಲು ರತನ್ ಟಾಟಾ ಅನುಮೋದನೆ ನೀಡಿದ್ದರು. ಇದಕ್ಕೂ ಮುನ್ನ "ದಿ ವಿಂಗ್ಡ್ ವಂಡರ್ಸ್ ಆಫ್ ರಾಷ್ಟ್ರಪತಿ ಭವನ"ಮತ್ತು "ಅಬೋಡ್ ಅಂಡರ್ ದ ಡೋಮ್" ಎನ್ನುವ ಕೃತಿಗಳನ್ನೂ ಬರೆದವರಾಗಿದ್ದಾರೆ.
ಅಂದಾಜು ಹಾರ್ಪರ್ ಕಾಲಿನ್ಸ್ 2 ಕೋಟಿಗೆ ಬಿಡ್ ಗೆದ್ದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರತನ್ ಟಾಟಾ ಜೀವನ ಚರಿತ್ರೆಯ ಪ್ರಿಂಟ್, ಈ ಬುಕ್ ಮತ್ತು ಆಡಿಯೋಬುಕ್ ಫಾರ್ಮಾಟ್ ಗಳ ವಿಶ್ವಾದ್ಯಂತ ಹಕ್ಕುಗಳನ್ನು ಹಾರ್ಪರ್ ಕಾಲಿನ್ಸ್ ಹೊಂದಿರುತ್ತದೆ. ಆದರೆ, ಪುಸ್ತಕವನ್ನು ಆಧರಿಸಿ ನಿರ್ಮಾಣವಾಗಲಿರುವ ಒಟಿಟಿ (OTT) ವೆಬ್ ಸರಣಿಯ ಹಕ್ಕುಗಳು, ಚಿತ್ರಗಳ (Film) ಹಕ್ಕುಗಳು ಮಾತ್ರ ಲೇಖಕರ ಬಳಿ ಇರುತ್ತದೆ. "ಈ ಪುಸ್ತಕದ ಕುರಿತಾಗಿ ಸಾಕಷ್ಟು ಬೇಡಿಕೆಗಳು ಬಂದಿದ್ದವು. ನಾನ್ ಫಿಕ್ಷನ್ ವಿಭಾಗದಲ್ಲಿ ಭಾರತದ ಪುಸ್ತಕ ಜಗತ್ತಿನಲ್ಲಿ ಇದು ದೊಡ್ಡ ಡೀಲ್ ಆಗಿರಲಿದೆ' ಎಂದು ಪ್ರಕಾಶಕರನ್ನು ಉಲ್ಲೇಖಿಸಿ ಹೇಳಲಾಗಿದೆ. ಪುಸ್ತಕದ ಹಕ್ಕುಗಳಿಗಾಗಿ ಲೇಖಕರು ಪ್ರಕಾಶಕರಿಂದ ಮುಂಗಡ ಹಣವನ್ನು ಪಡೆಯುತ್ತಾರೆ. ಪ್ರಕಾಶಕರು ಪುಸ್ತಕ ಮಾರಾಟದಿಂದ ಮೊತ್ತವನ್ನು ಮರುಪಾವತಿಸಿದಾಗ, ಲೇಖಕ ರಾಯಧನದ ರೂಪದಲ್ಲಿ ಮಾರಾಟದಿಂದ ಶೇಖಡಾವಾರು ಮೊತ್ತವನ್ನು ಸ್ವೀಕರಿಸಲು ಆರಂಭಿಸಲಿದ್ದು, ಇದು ಶೇಕಡಾ 5 ರಿಂದ 15ರವರೆಗೂ ಇರಲಿದೆ ಎಂದು ತಿಳಿಸಲಾಗಿದೆ.
ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಹೀಗೇಕೆ ಬರ್ತಡೇ ಆಚರಿಸಿದ್ರು...?
ಪ್ಲೇಯಿಂಗ್ ಇಟ್ ಮೈ ವೇ ಗೆ ನಡೆದಿತ್ತು ಬಿಡ್ಡಿಂಗ್: ಭಾರತ ಪುಸ್ತಕ ಜಗತ್ತಿನಲ್ಲಿ ನಾನ್-ಫಿಕ್ಷನ್ ವಿಭಾಗದ ಹಕ್ಕುಗಳಿಗಾಗಿ ಈ ಹಿಂದೆ ಬಿಡ್ಡಿಂಗ್ ನಡೆದಿದ್ದು ಸಚಿನ್ ತೆಂಡುಲ್ಕರ್ ಜೀವನ ಚರಿತ್ರೆಗೆ. 2014ರಲ್ಲಿ ಸಚಿನ್ ತೆಂಡುಲ್ಕರ್ ಅವರ ಪ್ಲೇಯಿಂಗ್ ಇಟ್ ಮೈ ವೇ ಜೀವನಚರಿತ್ರೆಯನ್ನೂ ಹಾಡರ್ & ಸ್ಟೌಟನ್ ಬಿಡ್ಡಿಂಗ್ ಮೂಲಕ ಜಯಿಸಿತ್ತು. ಕಳೆದ ವರ್ಷ ಜೂನ್‌ನಲ್ಲಿ, ಮತ್ತೊಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಟಾಟಾ ಗ್ರೂಪ್ ಕುರಿತು #TataStories ಎಂಬ ಸ್ಪೂರ್ತಿದಾಯಕ ಕಥೆಗಳ ಸಂಗ್ರಹವನ್ನು ಪ್ರಕಟ ಮಾಡಿತ್ತು.