ನವದೆಹಲಿ(ನ.09): ಕಿರಾಣಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಬೆಂಗಳೂರು ಮೂಲದ ಜನಪ್ರಿಯ ಇ-ಕಾಮರ್ಸ್‌ ಕಂಪನಿ ಬಿಗ್‌ ಬಾಸ್ಕೆಟ್‌ನ 2 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆಯಿದೆ. ಈ ಕುರಿತು ಕಂಪನಿಯು ಬೆಂಗಳೂರಿನ ಸೈಬರ್‌ ಅಪರಾಧ ಘಟಕಕ್ಕೆ ದೂರು ನೀಡಿದೆ.

ಬಿಗ್‌ ಬಾಸ್ಕೆಟ್‌ ಬಳಕೆದಾರರ ಹೆಸರು, ಇ-ಮೇಲ್‌ ಐಡಿ, ಪಾಸ್‌ವರ್ಡ್‌, ಫೋನ್‌ ನಂಬರ್‌, ವಿಳಾಸ, ಜನ್ಮ ದಿನಾಂಕ, ಸ್ಥಳ ಹಾಗೂ ಅವರ ಲಾಗಿನ್‌ ಐಪಿ ವಿಳಾಸವುಳ್ಳ ಸುಮಾರು 15 ಜಿ.ಬಿ. ಗಾತ್ರದ ದತ್ತಾಂಶ ಕೋಶವನ್ನು ಖದೀಮರು ಹ್ಯಾಕ್‌ ಮಾಡಿದ್ದಾರೆ. ಅದನ್ನು ಆನ್‌ಲೈನ್‌ನಲ್ಲಿ ಅಪರಾಧ ಎಸಗಲು ಬಳಕೆಯಾಗುವ ಡಾರ್ಕ್ ವೆಬ್‌ನಲ್ಲಿ 30 ಲಕ್ಷ ರು.ಗೆ ಮಾರಾಟಕ್ಕಿಟ್ಟಿದ್ದಾರೆ. ಸೈಬಲ್‌ ಎಂಬ ಸೈಬರ್‌ ವಿಚಕ್ಷಣಾ ಕಂಪನಿ ಇದನ್ನು ಅ.30ರಂದು ಪತ್ತೆಹಚ್ಚಿ ಬಿಗ್‌ ಬಾಸ್ಕೆಟ್‌ಗೆ ತಿಳಿಸಿದೆ.

‘ಕೆಲ ದಿನಗಳ ಹಿಂದೆ ನಮ್ಮ ಕಂಪನಿಯ ಮಾಹಿತಿ ಸೋರಿಕೆಯ ಬಗ್ಗೆ ನಮಗೆ ತಿಳಿಯಿತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ. ನಮ್ಮ ಗ್ರಾಹಕರ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಸಂಖ್ಯೆಯೂ ಸೇರಿದಂತೆ ಯಾವುದೇ ಹಣಕಾಸು ಮಾಹಿತಿಗಳನ್ನು ನಾವು ಸಂಗ್ರಹಿಸಿಡುವುದಿಲ್ಲ. ಹೀಗಾಗಿ ಸೋರಿಕೆಯಾದ ಮಾಹಿತಿಯಲ್ಲಿ ಅಂತಹ ಸೂಕ್ಷ್ಮ ಮಾಹಿತಿಗಳು ಇರಲು ಸಾಧ್ಯವಿಲ್ಲ’ ಎಂದು ಬಿಗ್‌ ಬಾಸ್ಕೆಟ್‌ ಕಂಪನಿ ಹೇಳಿದೆ.