ಜಿಎಸ್‌ಟಿ ತೆರಿಗೆ ಸ್ತರದಲ್ಲಿ ಏರಿಕೆ ಹಿನ್ನೆಲೆಯಲ್ಲಿ ದರ ಹೆಚ್ಚಳ . ಪ್ಯಾಕ್‌ ಮಾಡಿದ ಹಾಲು, ಮೊಸರು, ಧವಸ, ಧಾನ್ಯಗಳು ದುಬಾರಿ.  ಅಗ್ಗದ ದರ ಹೋಟೆಲ್‌ ರೂಂ, ಆಸ್ಪತ್ರೆ ಐಸಿಯು ಶುಲ್ಕ ಹೆಚ್ಚಳ.ಇ

ನವದೆಹಲಿ (ಜು.17): ದಿನಬಳಕೆಯ ವಿವಿಧ ವಸ್ತುಗಳು ಮತ್ತು ಹಲವು ಸೇವೆಗಳ ಮೇಲಿನ ಜಿಎಸ್‌ಟಿ ತೆರಿಗೆ ದರ ಹೆಚ್ಚಿಸುವ ಜಿಎಸ್‌ಟಿ ಮಂಡಳಿಯ ನಿರ್ಧಾರ ಜು.18ರ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ಮತ್ತೊಂದು ಸುತ್ತಿನಲ್ಲಿ ಜೇಬು ಸುಡುವುದು ಖಚಿತವಾಗಿದೆ. ಪ್ಯಾಕ್‌ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್‌, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಕೋಕೋಪೀಟ್‌ಗೆ ಇನ್ನು ಶೇ.5ರಷ್ಟುತೆರಿಗೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಇವೆಲ್ಲಾ ದುಬಾರಿಯಾಗಲಿದೆ. ಜೊತೆಗೆ ನಿತ್ಯದ ಬಾಡಿಗೆ 1000 ರು.ಗಿಂತ ಕಡಿಮೆ ಇರುವ ಹೋಟೆಲ್‌ ಕೊಠಡಿಗಳಿಗೆ ಇದ್ದ ವಿನಾಯ್ತಿ ರದ್ದಾಗಿ, ಇನ್ನು ಶೇ.12ರಷ್ಟುತೆರಿಗೆ ಬೀಳಲಿದೆ. ಅಲ್ಲದೆ ನಿತ್ಯ 5000 ರು.ಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‌ಗೆ ಶೇ.5ರಷ್ಟು ಜಿಎಸ್‌ಟಿ ಜಾರಿಯಾಗುವ ಕಾರಣ ಅದು ಕೂಡಾ ದುಬಾರಿಯಾಗಲಿದೆ. ಕೇಂದ್ರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜನ ಸಾಮಾನ್ಯರ ಕಷ್ಟ ಕೇಂದ್ರ ಸರಕಾರ ಅರಿತುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಯಾವ ವಸ್ತುಗಳ ದರ ಏರಿಕೆ?: ಪ್ಯಾಕ್‌ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್‌, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಕೋಕೋಪೀಟ್‌. ಪ್ಯಾಕ್‌ ಮಾಡಿದ ಬ್ರ್ಯಾಂಡೆಡ್‌ ಭೂಪಟ, ಚಾರ್ಚ್‌, ಅಟ್ಲಾಸ್‌, ಸೋಲಾರ್‌ ವಾಟರ್‌ ಹೀಟರ್‌, ಮುದ್ರಣ, ಬರಹ/ ಚಿತ್ರಕಲೆಯ ಇಂಕ್‌, ಎಲ್‌ಇಡಿ ಬಲ್‌್ಬ, ಎಲ್‌ಇಡಿ ಲ್ಯಾಂಪ್‌

ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್‌, ಜವಳಿ ಸೇವೆಗಳು, ಅಂಚೆ ಇಲಾಖೆ ಬುಕ್‌ ಪೋಸ್ಟ್‌, 10 ಗ್ರಾಂಗಿಂತ ಕಡಿಮೆ ಇರುವ ಲಕೋಟೆ, ಚೆಕ್‌ಬುಕ್‌. ನಿತ್ಯದ ಬಾಡಿಗೆ 1000 ರುಗಿಂತ ಕಡಿಮೆ ಇರುವ ಹೋಟೆಲ್‌ ಕೊಠಡಿಗಳಿಗೂ ಇನ್ನು ಶೇ.12ರಷ್ಟುತೆರಿಗೆ ಜಾರಿ. ನಿತ್ಯ 5000 ರು.ಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‌ಗೆ ಶೇ.5ರಷ್ಟು ಜಿಎಸ್‌ಟಿ.

ದಿನಕ್ಕೆ 5000 ರು.ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು, ಮಾಸಿಕ 2500 ರು.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್‌ಟಿ ಜಾರಿ. ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು ತಮ್ಮ ವಸತಿ ಕಟ್ಟಡಗಳನ್ನು ಬಾಡಿಗೆಗಾಗಿ ನೀಡಿದ್ದರೆ ಅದಕ್ಕೆ ಈವರೆಗೆ ಇದ್ದ ವಿನಾಯಿತಿ ರದ್ದು. ಬ್ಲಡ್‌ ಬ್ಯಾಂಕ್‌ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯ್ತಿ ರದ್ದು.

GST On Hospital Room: ಸೋಮವಾರದಿಂದ ಆಸ್ಪತ್ರೆ ವೆಚ್ಚ ಇನ್ನಷ್ಟು ದುಬಾರಿ,

ಶೇ.5 ಜಿಎಸ್‌ಟಿ ರದ್ದತಿಗೆ ಸಿದ್ದು ಆಗ್ರಹ:
ಮಂಡಕ್ಕಿ ಉತ್ಪಾದನೆ ಮೇಲೂ ಶೇ.5 ರಷ್ಟುಜಿಎಸ್‌ಟಿ ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿ. ಕೇಂದ್ರ ಸರ್ಕಾರವು ಕೂಡಲೇ ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಬಡವರ ಅನ್ನದ ತಟ್ಟೆಗೆ ಕೈ ಹಾಕಿ ತುತ್ತು ಅನ್ನವನ್ನೂ ಕಿತ್ತುಕೊಳ್ಳುವುದು ಅಮಾನವೀಯ ಸಂಗತಿ. ಕೂಡಲೇ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಆಗ್ರಹಿಸಿದ್ದಾರೆ.

‘ಕೇಂದ್ರ ಸರ್ಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗ ಈಗಾಗಲೇ ಹೈರಾಣಾಗಿದೆ. ಇದೀಗ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5 ರಷ್ಟುಜಿಎಸ್‌ಟಿ ವಿಧಿಸಿರುವುದು ಕ್ರೌರ್ಯದ ಪರಮಾವಧಿ. ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂಗಳಿಕೆ ಇರುವುದಿಲ್ಲ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೆ ಜನತೆಯನ್ನು ಶತ್ರುಗಳಂತೆ ಭಾವಿಸಿ ಡಬಲ್‌ ಎಂಜಿನ್‌ ಸರ್ಕಾರಗಳು ನಿರ್ಧಾರ ಕೈಗೊಳ್ಳುತ್ತಿವೆ’ ಎಂದು ಕಿಡಿ ಕಾರಿದ್ದಾರೆ.

‘ಮಂಡಕ್ಕಿ ಉತ್ಪಾದನೆಗೆ ತಗಲುವ ವೆಚ್ಚ, ಮಾರಾಟ ವೆಚ್ಚಕ್ಕಿಂತ ಹೆಚ್ಚಾಗಿದೆ. ಮಳೆಗಾಲದಲ್ಲಿ ಮಂಡಕ್ಕಿ ಉತ್ಪಾದನೆಗೆ ಹಲವು ತೊಂದರೆಗಳಿವೆ. ಅಕ್ಕಿ ಒಣಗಿರುವುದಿಲ್ಲ, ಭತ್ತದ ಬೆಲೆ ಗಗನಕ್ಕೆ ಏರಿರುತ್ತದೆ. ಮಾರಾಟವೂ ಕುಸಿದಿರುತ್ತದೆ. ಮಳೆಗಾಲದಲ್ಲಿ ಅಕ್ಕಿ ನೆನೆದರೆ ಮಂಡಕ್ಕಿ ಭಟ್ಟಿಗಳನ್ನು ವಾರಗಟ್ಟಲೆ ಮುಚ್ಚಬೇಕಾಗುತ್ತದೆ. ಭಟ್ಟಿಮುಚ್ಚಿದರೆ ಮಂಡಕ್ಕಿ ಕಾರ್ಮಿಕರಿಗೆ ಬೇರೆ ಕಡೆ ಕೂಲಿ ಕೆಲಸ ಸಹ ಸಿಗುವುದಿಲ್ಲ. ಒಂದು ಹೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು ಪರದಾಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಅರಿವಿದೆಯೇ’ ಎಂದು ಪ್ರಶ್ನಿಸಿದರು.

‘ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದಿದ್ದರೂ ಮಂಡಕ್ಕಿ ಮತ್ತಿತರ ಸಣ್ಣ-ಪುಟ್ಟಬಡವರ ಆಹಾರ ಉತ್ಪಾದನೆ ಮೇಲೆ ಜಿಎಸ್‌ಟಿ ವಿಧಿಸುತ್ತಿರಲಿಲ್ಲ. ದಾವಣಗೆರೆಯೊಂದರಲ್ಲೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮಂಡಕ್ಕಿ ಉತ್ಪಾದನೆಯನ್ನೇ ನೆಚ್ಚಿಕೊಂಡಿವೆ. ದಾವಣಗೆರೆ ಮತ್ತಿತರ ಕಡೆಯ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದವರು ನನ್ನನ್ನು ಭೇಟಿಯಾಗಿ ಮಂಡಕ್ಕಿಗೂ ಜಿಎಸ್‌ಟಿ ವಿಧಿಸಿರುವುದರಿಂದ ಆಗಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.